Share News

ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಉಪವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆಯೊಂದನ್ನು ನಡೆಸಿದ್ದು, ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಅಂತರರಾಷ್ಟ್ರೀಯ ಡ್ರಗ್ ಪೆಡ್ಲರ್ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

​ನೈಜೀರಿಯಾ ಮೂಲದ ಬ್ಲೆಸ್ಸಿಂಗ್ ಒಪುಟಾ (34) ಬಂಧಿತ ಆರೋಪಿಯಾಗಿದ್ದಾಳೆ. ಈಕೆಯ ಬಳಿಯಿಂದ ಸುಮಾರು 180 ಗ್ರಾಂ ಕೊಕೇನ್‌ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು ₹18 ಲಕ್ಷ ಎಂದು ಅಂದಾಜಿಸಲಾಗಿದೆ.

ಆನೇಕಲ್ ವ್ಯಾಪ್ತಿಯ ಪ್ರತಿಷ್ಠಿತ ಅಲಯನ್ಸ್ ಕಾಲೇಜು ಸಮೀಪ ವಿದೇಶಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಾ, ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಹಾಗೂ ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡು ಈಕೆ ಕೊಕೇನ್ ನೆಟ್‌ವರ್ಕ್ ಚಲಾಯಿಸುತ್ತಿದ್ದಳು ಎನ್ನಲಾಗಿದೆ. ಖಚಿತ ಮಾಹಿತಿ ಬೆನ್ನತ್ತಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ.

ಆನೇಕಲ್ ಪೊಲೀಸ್ ಠಾಣೆಯ ದಕ್ಷ ಇನ್ಸ್‌ಪೆಕ್ಟರ್ ಆರ್. ಪ್ರಕಾಶ್ ಅವರ ನೇತೃತ್ವದ ವಿಶೇಷ ಪೊಲೀಸ್ ತಂಡ ಈ ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದೆ. ದಾಳಿಯ ವೇಳೆ ಸಿಕ್ಕಿಬಿದ್ದ ಆರೋಪಿತೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆಕೆಯ ಕರಾಳ ಮುಖ ಹಾಗೂ ಮಾದಕ ವಸ್ತು ಜಾಲದ ನಂಟು ಬೆಳಕಿಗೆ ಬಂದಿದೆ. ಸದ್ಯ ಆರೋಪಿತೆಯ ಬಳಿಯಿದ್ದ ₹18 ಲಕ್ಷ ಮೌಲ್ಯದ ಕೊಕೇನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ಬಂಧಿತ ನೈಜೀರಿಯಾ ಮಹಿಳೆಯ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ನಿಯಂತ್ರಣ ಕಾಯ್ದೆ (NDPS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮಾದಕ ವಸ್ತು ಜಾಲದ ಹಿಂದೆ ಬೆಂಗಳೂರಿನಲ್ಲಿ ಇನ್ಯಾರೆಲ್ಲಾ ಸಕ್ರಿಯರಾಗಿದ್ದಾರೆ? ಈಕೆಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮುಖ್ಯ ಕಿಂಗ್‌ಪಿನ್ ಯಾರು? ಎಂಬಿತ್ಯಾದಿ ಆಯಾಮಗಳಲ್ಲಿ ಆನೇಕಲ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

​ಕಾನೂನು ಮತ್ತು ಸುವ್ಯವಸ್ಥೆಯ ನಿಖರ ಸುದ್ದಿಗಳಿಗಾಗಿ ಸದಾ ವೀಕ್ಷಿಸುತ್ತಿರಿ: www.arakshakaratimesmedia.com

 


Share News