ಗುಡಿಬಂಡೆ (ಚಿಕ್ಕಬಳ್ಳಾಪುರ): ಅನುಮಾನಾಸ್ಪದವಾಗಿ ಮೃತಪಟ್ಟ ಯುವಕನ ಮರಣೋತ್ತರ ಪರೀಕ್ಷೆ ವೇಳೆ ಆತನ ಹೊಟ್ಟೆಯಲ್ಲಿ ಲೈಟರ್, ಬ್ಯಾಟರಿ ಸೆಲ್ ಹಾಗೂ ಬೀಗದ ಕೀಗಳು ಸೇರಿದಂತೆ ಹಲವು ಅಪಾಯಕಾರಿ ಲೋಹದ ವಸ್ತುಗಳು ಪತ್ತೆಯಾಗಿರುವ ವಿಚಿತ್ರ ಹಾಗೂ ಆಘಾತಕಾರಿ ಘಟನೆ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.
ಗುಡಿಬಂಡೆ ತಾಲೂಕಿನ ಬಾಪೂಜಿನಗರದ ಅಕ್ಕನ ಮನೆಯಲ್ಲಿದ್ದ ನಲ್ಲಕದಿರೇನಹಳ್ಳಿ ಮೂಲದ ಮಹೇಶ್ (28) ಮೃತ ಯುವಕ.
ವರದಿಯ ಮುಖ್ಯಾಂಶಗಳು:
ಅನುಮಾನಾಸ್ಪದ ಸಾವು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವಕ ನೇಣು ಬಿಗಿದುಕೊಂಡಿದ್ದಾನೆ ಎನ್ನಲಾಗಿದ್ದರೂ, ಮೃತದೇಹ ನೆಲದ ಮೇಲೆ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು.
ಹೊಟ್ಟೆಯಲ್ಲಿ ವಸ್ತುಗಳ ಸಂತೆ: ಶವಪರೀಕ್ಷೆ ನಡೆಸಿದ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಹೊಟ್ಟೆಯಲ್ಲಿದ್ದ ಲೈಟರ್, ಬ್ಯಾಟರಿ ಸೆಲ್, ಕೀಗಳು, ಹೇರ್ ಪಿನ್, ಔಷಧಿ ಟ್ಯೂಬ್ ಹಾಗೂ ಕಬ್ಬಿಣದ ಚೂರುಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಪೊಲೀಸ್ ತನಿಖೆ: ಯುವಕನಿಗೆ ಸಾಲದ ಸಮಸ್ಯೆಯಿದ್ದು, ಈ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಈ ಲೋಹದ ವಸ್ತುಗಳನ್ನು ಆತ ಯಾವಾಗ ನುಂಗಿದ್ದ ಎಂಬುದು ಯಾರಿಗೂ ತಿಳಿದಿಲ್ಲ.
ಪ್ರಕರಣ ದಾಖಲಿಸಿಕೊಂಡಿರುವ ಗುಡಿಬಂಡೆ ಠಾಣೆ ಪೊಲೀಸರು ಸಾವಿನ ನಿಜವಾದ ಕಾರಣ ಹಾಗೂ ರಹಸ್ಯವನ್ನು ಭೇದಿಸಲು ಎಲ್ಲಾ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.