Share News

ಬನಶಂಕರಿ 2ನೇ ಹಂತದ ನಿವಾಸಿಯೊಬ್ಬರು ಕಳೆದ ಜನವರಿ 25ರಂದು ಕುಟುಂಬ ಸಮೇತ ತಮಿಳುನಾಡಿನ ಆರ್ಕಾಟ್‌ಗೆ ಪ್ರವಾಸಕ್ಕೆ ತೆರಳಿದ್ದ ಸಮಯದಲ್ಲಿ, ಅವರ ಮನೆಯ ಬೀಗ ಮುರಿದು ನೂರಾರು ಗ್ರಾಂ ಚಿನ್ನ ಹಾಗೂ ಪ್ಲಾಟಿನಂ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬನಶಂಕರಿ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಶ್ರೀ. ಕೊಟ್ರೇಶಿ ಮತ್ತು ಶ್ರೀ. ನಿಂಗನಗೌಡ ಪಾಟೀಲ್ ಅವರುಗಳು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು.

ತನಿಖೆಯ ವೇಳೆ ಫೆಬ್ರವರಿ 5ರಂದು ಯಲಹಂಕ ರೈಲ್ವೆ ನಿಲ್ದಾಣದ ಬಳಿ ಓರ್ವ ಆರೋಪಿಯನ್ನು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆಯಲಾಯಿತು. ಆತನ ವಿಚಾರಣೆಯಿಂದ ಸಿಕ್ಕ ಮಾಹಿತಿಯ ಮೇರೆಗೆ, ಕಳ್ಳತನದ ಮಾಲು ಸ್ವೀಕರಿಸಿದವರು ಹಾಗೂ ಈ ಕೃತ್ಯದಲ್ಲಿ ಭಾಗಿಯಾದ ಉಳಿದ ನಾಲ್ವರು ಸಹಚರರನ್ನು ಹಂತ ಹಂತವಾಗಿ ವಿವಿಧೆಡೆ ಬಂಧಿಸಲಾಗಿದೆ.

ಬಂಧಿತರಿಂದ ಒಟ್ಟು 589 ಗ್ರಾಂ ಚಿನ್ನಾಭರಣ, 1 ಕೆ ಜಿ 126 ಗ್ರಾಂ ಬೆಳ್ಳಿ, 9.50 ಲಕ್ಷ ನಗದು, ಒಂದು ಕಾರು ಮತ್ತು ಮೂರು ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಈ ಎಲ್ಲಾ ಸ್ವತ್ತುಗಳ ಒಟ್ಟು ಮೌಲ್ಯ ಅಂದಾಜು 1,26,63,000 ರೂಪಾಯಿಗಳು ಎಂದು ತಿಳಿದುಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News