ಬೈಲಹೊಂಗಲ: ಬಸ್ ನಿಲ್ದಾಣಗಳಲ್ಲಿ ಬಸ್ ಹತ್ತುವ ಭರಾಟೆಯಲ್ಲಿದ್ದ ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡು ಅವರ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಬೈಲಹೊಂಗಲ ಪೊಲೀಸರು, ಓರ್ವ ಮಹಿಳಾ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು 45 ವರ್ಷದ ಅನಿತಾ ನಿತೀನ್ ಚೌಗೂಲೆ ಎಂದು ಗುರುತಿಸಲಾಗಿದೆ. ಈಕೆಯ ಬಂಧನದಿಂದಾಗಿ ಬೈಲಹೊಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಪ್ರಮುಖ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಇತ್ತೀಚೆಗೆ ಬೈಲಹೊಂಗಲ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಪ್ರಯಾಣಿಕರ ಚಿನ್ನದ ಸರ ಹಾಗೂ ಇತರ ಆಭರಣಗಳು ನಾಪತ್ತೆಯಾಗುತ್ತಿರುವ ಬಗ್ಗೆ ಸರಣಿ ದೂರುಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಪಿಐ ಪ್ರಮೋದ ಸಿ. ಯಲಿಗಾರ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡವು ಸಿಸಿಟಿವಿ ದೃಶ್ಯಾವಳಿ ಹಾಗೂ ವೈಜ್ಞಾನಿಕ ತನಿಖಾ ವಿಧಾನಗಳನ್ನು ಬಳಸಿ ಆರೋಪಿತೆಯನ್ನು ಪತ್ತೆಹಚ್ಚಿ ಬಲೆಗೆ ಬೀಳಿಸಿದೆ.
ಆರೋಪಿತೆಯ ವಿರುದ್ಧ ಈಗಾಗಲೇ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 268/2025 (ಬಿಎನ್‌ಎಸ್ ಕಲಂ 303(2)) ಅಡಿ ತನಿಖೆ ನಡೆಸಿದಾಗ, ಆಕೆಯಿಂದ ಕಳುವಾದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ತೀವ್ರ ವಿಚಾರಣೆಯ ವೇಳೆ, ಈಕೆ ಕೇವಲ ಒಂದು ಪ್ರಕರಣವಲ್ಲದೆ ಠಾಣಾ ವ್ಯಾಪ್ತಿಯ ಇನ್ನೂ ಎರಡು ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಸ್ ನಿಲ್ದಾಣ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಸಾರ್ವಜನಿಕರು ತಮ್ಮ ಅಮೂಲ್ಯ ಆಭರಣಗಳು ಮತ್ತು ಬ್ಯಾಗ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಕಿಲಾಡಿ ಕಳ್ಳಿಯನ್ನು ಬಂಧಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ :- ಆಂಟೋನಿ ಪತ್ರಕರ್ತ