Share News

ಮಡಿಕೇರಿ: ನಗರದ ಹೊರವಲಯದ ಸ್ಟೀವರ್ಟ್ ಹಿಲ್ ಬಳಿ ಇರುವ ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟಕದ ಕಳಪೆ ನಿರ್ವಹಣೆ ಹಾಗೂ ಅವೈಜ್ಞಾನಿಕ ಕಸ ವಿಲೇವಾರಿ ವಿಧಾನವನ್ನು ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕಸ ವಿಲೇವಾರಿ ಘಟಕದ ಗೇಟ್ ಬಳಿ ಇಳಿಯುತ್ತಿದ್ದಂತೆ ಸುಗಮ ರಸ್ತೆ ಇಲ್ಲದಿರುವುದನ್ನು ಗಮನಿಸಿದ ನ್ಯಾಯಮೂರ್ತಿ ಫಣೀಂದ್ರ, “ರಸ್ತೆಯನ್ನೇ ಸರಿಯಾಗಿ ಇಟ್ಟುಕೊಂಡಿಲ್ಲ, ಇನ್ನು ಕಸವನ್ನು ಹೇಗೆ ವಿಲೇವಾರಿ ಮಾಡುತ್ತಿದ್ದೀರಾ?” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಹೆಚ್ಚು ಮಳೆ ಬೀಳುವ ಈ ಪ್ರದೇಶದಲ್ಲಿ ವೈಜ್ಞಾನಿಕವಾಗಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸದೆ, ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

​”ಕಸದಿಂದ ಸೋರುವ ನೀರು ಎಲ್ಲಿಗೆ ಹೋಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದೆಯೇ? ಕೆರೆಕಟ್ಟೆ, ಕಾಲುವೆ ಹಾಗೂ ಬೋರ್‌ವೆಲ್‌ಗಳ ಮೂಲಕ ಕಸದ ನೀರು ಸೇರಿ ಅಂತರ್ಜಲ ಮಲಿನವಾಗುವ ಸಾಧ್ಯತೆಯಿದೆ. ಈ ಬಗ್ಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಪರಿಸರ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಎಲ್ಲಾ ಎಂಜಿನಿಯರ್‌ಗಳ ಮೇಲೂ ಪ್ರಕರಣ ದಾಖಲಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು. ಕಸ ವಿಲೇವಾರಿಗೆ ಪ್ರಸ್ತುತ ಇರುವ ಆರು ಎಕರೆ ಜಾಗ ಸಾಲುವುದಿಲ್ಲ, ಆದ್ದರಿಂದ ಬೇರೆ ಜಾಗವನ್ನು ಕಾಯ್ದಿರಿಸಬೇಕು ಎಂದೂ ಅವರು ಸಲಹೆ ನೀಡಿದರು. ಕಳಪೆ ನಿರ್ವಹಣೆ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವುದಾಗಿಯೂ ಎಚ್ಚರಿಸಿದರು.

ಬಳಿಕ ನಗರದ ಮಾರುಕಟ್ಟೆ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಸ್ವಚ್ಛತೆ, ಕುಡಿಯುವ ನೀರು ಹಾಗೂ ಗಾಳಿ-ಬೆಳಕಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. ಮಾರುಕಟ್ಟೆಯಲ್ಲಿ ಮಳೆ ನೀರು ಬರದಂತೆ ತಡೆಯಲು ಮತ್ತು ಸ್ವಚ್ಛತೆಗೆ ಒತ್ತು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ವ್ಯಾಪಾರಸ್ಥರು ಎಲ್ಲೆಂದರಲ್ಲಿ ಕಸ ಬಿಸಾಡಿದರೆ ದಂಡ ವಿಧಿಸುವಂತೆ ಹಾಗೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಫಲಕಗಳನ್ನು ಅಳವಡಿಸುವಂತೆ ನಿರ್ದೇಶನ ನೀಡಿದರು.

ನಂತರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೂ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತರು, ಅಲ್ಲಿನ ಸ್ವಚ್ಛತೆ ಹಾಗೂ ಶೌಚಾಲಯಗಳ ನಿರ್ವಹಣೆಯನ್ನು ವೀಕ್ಷಿಸಿದರು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಬಸ್ ನಿಲ್ದಾಣದಲ್ಲಿ ಪ್ರತಿದಿನ ಸ್ವಚ್ಛತೆ ಕಾಯ್ದುಕೊಳ್ಳಲು ಹಾಗೂ ಗಡಿಯಾರ ಅಳವಡಿಸಲು ಸಲಹೆ ನೀಡಿದರು. ಇದೇ ವೇಳೆ ವೃದ್ಧೆಯೊಬ್ಬರು ಮದೆನಾಡು, ಬೆಟ್ಟತ್ತೂರು, ಕಾಟಕೇರಿಗೆ ಹೆಚ್ಚುವರಿ ಬಸ್ಸು ಓಡಿಸುವಂತೆ ಮಾಡಿದ ಮನವಿಯನ್ನು ಆಲಿಸಿದರು.

​ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದು, ಮಾಹಿತಿ ನೀಡಿದರು.

 


Share News