ನಗರದ ಮಹದೇವಪುರ, ಕೆ.ಜಿ ಹಳ್ಳಿ ಹಾಗೂ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ, ಮೂವರು ಹೊರರಾಜ್ಯದ ವ್ಯಕ್ತಿಗಳು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 37 ಕೆಜಿ 400 ಗ್ರಾಂ ಗಾಂಜಾ , 33 ಗ್ರಾಂ ಹೈಡ್ರೋ ಗಾಂಜಾ, 23.19 ಗ್ರಾಂ ಎಂ.ಡಿ.ಎಂ.ಎ ವಶಪಡಿಸಿಕೊಂಡಿದ್ದು, ಈ ಎಲ್ಲಾ ವಸ್ತುಗಳ ಒಟ್ಟು ಸರ್ಕಾರಿ ಮೌಲ್ಯ 24.12 ಲಕ್ಷವಾಗಿದ್ದು, ಮಾರುಕಟ್ಟೆ ಮೌಲ್ಯ ಸುಮಾರು 48.24 ಲಕ್ಷ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳು ಹೆಚ್ಚಿನ ಹಣದ ಆಸೆಗೆ ಹೊರರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಡ್ರಗ್ಸ್ ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇವರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಮುಖ್ಯಸ್ಥರ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ಈ ಕಾರ್ಯಾಚರಣೆಯನ್ನು ಡಿಸಿಪಿಗಳಾದ ಶ್ರೀ. ಸೈದುಲು ಅಡಾವತ್, ಡಾ. ವಿಕ್ರಮ್ ವಿ ಅಮಟೆ ಮತ್ತು ಶ್ರೀ. ಬಿ ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್