ಉಡುಪಿ: ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕ್ರೈಸ್ತರ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ, ಪ್ರತಿಭಟನೆ ನಡೆಸಿದ ಹಿಂದೂ ಜಾಗರಣ ವೇದಿಕೆಯ (ಹಿಂಜಾವೇ) ಮುಖಂಡ ಶ್ರೀಕಾಂತ್ ಶೆಟ್ಟಿ ಸೇರಿದಂತೆ ಒಟ್ಟು 38 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮಾರ್ಚ್ 20 ರಿಂದ 22 ರ ವರೆಗೆ ಸಹೋದರ ಮೋಹನ್ ಸಿ. ಲಾಜಾರಸ್ ಅವರ ನೇತೃತ್ವದಲ್ಲಿ ‘ಸಮಾಧಾನ ಮಹೋತ್ಸವ’ ಪ್ರಾರ್ಥನಾ ಕೂಟವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಹೈಕೋರ್ಟ್ನಿಂದಲೂ ಅನುಮತಿ ದೊರೆತಿತ್ತು. ಆದರೆ, ತಮಿಳುನಾಡಿನ ವಿವಾದಾತ್ಮಕ ವ್ಯಕ್ತಿ ಲಾಜಾರಸ್ ಅವರಿಗೆ ಅವಕಾಶ ನೀಡಬಾರದು ಮತ್ತು ಜಿಲ್ಲಾಡಳಿತ ಈ ಕೂಟಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿ ಶ್ರೀಕಾಂತ್ ಶೆಟ್ಟಿ ನೇತೃತ್ವದಲ್ಲಿ ಹಿಂಜಾವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ನ್ಯಾಯಾಲಯದ ಅನುಮತಿಯೊಂದಿಗೆ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಶ್ರೀಕಾಂತ್ ಶೆಟ್ಟಿ ಹಾಗೂ ಇತರ 37 ಕಾರ್ಯಕರ್ತರನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕ್ರೈಸ್ತ ಸಂಘಟನೆಯಿಂದ ಅಭಿನಂದನೆ:
ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಕ್ರೈಸ್ತ ಸಂಘಟನೆಯ ಅಧ್ಯಕ್ಷರಾದ ಸ್ಟ್ಯಾನಿ ಪಿಂಟೋ ಅವರು, ಕಾರ್ಯಕ್ರಮಕ್ಕೆ ಸೂಕ್ತ ರಕ್ಷಣೆ ನೀಡಿದ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ವಂದನೆ ಸಲ್ಲಿಸಿದ್ದಾರೆ.
“ಕ್ರೈಸ್ತರು ಸಮಾಧಾನ ಪ್ರಿಯರು ಮತ್ತು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದವರು. ಸಹೋದರ ಮೋಹನ್ ಸಿ. ಲಾಜಾರಸ್ ಅವರು ಹಲವು ವರ್ಷಗಳಿಂದ ಕರ್ನಾಟಕದಾದ್ಯಂತ ಇಂತಹ ಕೂಟಗಳನ್ನು ನಡೆಸಿಕೊಂಡು ಬಂದಿದ್ದಾರೆ. ಈ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರನ್ನು ಬಂಧಿಸಿ, ಸುಗಮವಾಗಿ ಕೂಟ ನಡೆಯಲು ಸಹಕರಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಧನ್ಯವಾದಗಳು,” ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಅವರಿಗೂ ಸ್ಟ್ಯಾನಿ ಪಿಂಟೋ ಅವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಸದ್ಯ ಉಡುಪಿಯಲ್ಲಿ ಪ್ರಾರ್ಥನಾ ಕೂಟವು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮುಂದುವರಿದಿದೆ.