ನೆಲಮಂಗಲ: ತರಗತಿಯಲ್ಲಿ ಪಾಠ ಮಾಡಬೇಕಾದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬ ವಿದ್ಯಾರ್ಥಿನಿಗೆ ಮೈಕ್‌ನಲ್ಲೇ ಪ್ರಪೋಸ್ ಮಾಡಿ ಪೊಲೀಸರ ಅತಿಥಿಯಾದ ಘಟನೆ ನೆಲಮಂಗಲದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಆರೋಪಿ ಅಬ್ದುಲ್ ಎಂಬಾತನನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಅಬ್ದುಲ್, ಎಂದಿನಂತೆ ತರಗತಿ ನಡೆಯುತ್ತಿದ್ದ ವೇಳೆ ವೇದಿಕೆಯ ಮೇಲೆ ಮೈಕ್ ಹಿಡಿದು ವಿದ್ಯಾರ್ಥಿನಿಯೊಬ್ಬಳಿಗೆ ಚಾಕೋಲೆಟ್ ನೀಡಿ ಪ್ರೇಮ ನಿವೇದನೆ (Propose) ಮಾಡಿದ್ದಾನೆ. ಇದರಿಂದ ದಿಗ್ಭ್ರಮೆಗೊಂಡ ವಿದ್ಯಾರ್ಥಿನಿ ಸ್ಥಳದಲ್ಲೇ ಆಕ್ಷೇಪ ವ್ಯಕ್ತಪಡಿಸಿದಾಗ, ಉಲ್ಟಾ ಆಕೆಯ ಮೇಲೆಯೇ ಆರೋಪ ಹೊರಿಸಿದ್ದಾನೆ. “ನೀನೇ ನನ್ನ ಚೇಂಬರ್‌ಗೆ ಬಂದು ಪ್ರಪೋಸ್ ಮಾಡಿದ್ದೆ, ನನ್ನ ಬಳಿ ಸಿಸಿಟಿವಿ ಸಾಕ್ಷ್ಯ ಇದೆ” ಎಂದು ಎಲ್ಲರ ಮುಂದೆ ಸುಳ್ಳು ಹೇಳಿ ಆಕೆಯ ಚಾರಿತ್ರ್ಯ ಹರಣಕ್ಕೆ ಯತ್ನಿಸಿದ್ದಾನೆ.
ಪ್ರೊಫೆಸರ್‌ನ ಉದ್ಧಟತನದಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ ಮತ್ತು ಸಹಪಾಠಿಗಳು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಾಂಶುಪಾಲರಿಗೆ ದೂರು ನೀಡಲು ಮುಂದಾದಾಗ ಅಬ್ದುಲ್ ಸಮಜಾಯಿಷಿ ನೀಡಲು ಯತ್ನಿಸಿದ್ದು, ಕೆರಳಿದ ವಿದ್ಯಾರ್ಥಿಗಳು ಆತನಿಗೆ ಚಪ್ಪಲಿಯಿಂದ ಹಲ್ಲೆ ಮಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ತನಿಖೆಯ ವೇಳೆ ಅಬ್ದುಲ್ ಒಬ್ಬ ಸರಣಿ ಅಪರಾಧಿ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಹಿಂದೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಹಾಗೂ ತುಮಕೂರಿನ ಆಸ್ಪತ್ರೆಯಲ್ಲಿಯೂ ಸಹ ಇದೇ ರೀತಿ ವಿಕೃತಿ ಮೆರೆದಿದ್ದಕ್ಕಾಗಿ ಈತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಹೆಂಡತಿಯಿಂದ ದೂರವಾಗಿದ್ದ ಈತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದ್ದು, ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡು ಇಂತಹ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ.
ಕಾಲೇಜು ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ನೆಲಮಂಗಲ ಗ್ರಾಮಾಂತರ ಪೊಲೀಸರು ಕ್ರೈಂ ನಂಬರ್ 79 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಹೊಸ ಕಾನೂನಿನ ಅಡಿಯಲ್ಲಿ ಈ ಕೆಳಗಿನ ಸೆಕ್ಷನ್ ಹಾಕಲಾಗಿದೆ:
ಬಿಎನ್‌ಎಸ್ ಆಕ್ಟ್ 74 ಮತ್ತು 75: ಲೈಂಗಿಕ ಕಿರುಕುಳ ಮತ್ತು ಮಹಿಳೆಯ ಘನತೆಗೆ ಧಕ್ಕೆ.
ಬಿಎನ್‌ಎಸ್ ಸೆಕ್ಷನ್ 329 (3): ಕ್ರಿಮಿನಲ್ ಬೆದರಿಕೆ ಮತ್ತು ಇತರ ಉಲ್ಲಂಘನೆಗಳು.
“ವಿದ್ಯಾ ಮಂದಿರದಲ್ಲಿ ಇಂತಹ ಅನೈತಿಕ ಕೃತ್ಯ ಎಸಗುವ ವ್ಯಕ್ತಿಗಳು ಸಮಾಜಕ್ಕೆ ಕಪ್ಪುಚುಕ್ಕೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಪೊಲೀಸರು ತಿಳಿಸಿದ್ದಾರೆ.