Share News

ಚನ್ನಪಟ್ಟಣ: ತಾಲೂಕಿನ ಕೋಡಂಬಳ್ಳಿ-ಸಿಂಗರಾಜಿಪುರ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಕರಡಿಯೊಂದು ಭೀಕರ ದಾಳಿ ನಡೆಸಿದ್ದು, ಸವಾರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ-ಸಿಂಗರಾಜಿಪುರ ರಸ್ತೆಯ ದುಂಡುಮಾರಮ್ಮ ದೇವಸ್ಥಾನದ ಬಳಿ ಈ ಘಟನೆ ಸಂಭವಿಸಿದೆ. ವ್ಯಕ್ತಿಯೊಬ್ಬರು ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಪೊದೆಯಲ್ಲಿದ್ದ ಕರಡಿ ಏಕಾಏಕಿ ರಸ್ತೆಗೆ ಜಿಗಿದು ದಾಳಿ ಮಾಡಿದೆ. ಕರಡಿಯ ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ಸವಾರ, ತಕ್ಷಣವೇ ಬೈಕ್ ಬಿಟ್ಟು ದೂರಕ್ಕೆ ಓಡಿ ಹೋಗುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ.

ಸವಾರ ಕೈಗೆ ಸಿಗದಿದ್ದಾಗ ಆಕ್ರೋಶಗೊಂಡ ಕರಡಿ, ರಸ್ತೆಯಲ್ಲಿದ್ದ ಬೈಕ್ ಮೇಲೆ ತನ್ನ ವಿಕೃತಿ ಮೆರೆದಿದೆ. ಬೈಕನ್ನು ಜಜ್ಜಿ ಹಾಕುವ ಮೂಲಕ ವಾಹನಕ್ಕೆ ತೀವ್ರ ಹಾನಿ (ಡ್ಯಾಮೇಜ್) ಮಾಡಿದೆ. ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಸತತ ಪ್ರಯತ್ನದ ನಂತರ, ಗ್ರಾಮಸ್ಥರು ಬಲೆ ಬೀಸಿ ಕರಡಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕರಡಿ ಸೆರೆಯಾದ ನಂತರ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೆರೆಹಿಡಿಯಲಾದ ಕರಡಿಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲು ಕ್ರಮ ಕೈಗೊಂಡಿದ್ದಾರೆ.

​”ಕಾಡಿನ ಅಂಚಿನಲ್ಲಿರುವ ಈ ಭಾಗದಲ್ಲಿ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ಮತ್ತು ಮುಂಜಾನೆ ವೇಳೆ ಸಂಚರಿಸುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು,” ಎಂದು ಅರಣ್ಯಾಧಿಕಾರಿಗಳು ಸೂಚಿಸಿದ್ದಾರೆ.

ವರದಿ :- ಗಿಲ್ಬರ್ಟ್. ಜೆ


Share News