Share News

ಮಾರ್ಚ್ 25ರ ಬೆಳಗಿನ ಜಾವ ಸುಮಾರು 2:30 ಗಂಟೆಗೆ ನೆಲ್ಲುಕುಂಟೆಯ ಕಲ್ಯಾಣ ಮಂಟಪವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಊಟ ತರಲು ತಮ್ಮ ದ್ವಿಚಕ್ರ ವಾಹನದಲ್ಲಿ ಹುಣಸಮಾರನಹಳ್ಳಿ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಲಿಫ್ಟ್ ಕೇಳಿದಾಗ, ದೂರುದಾರರು ಅವರನ್ನು ತಮ್ಮ ವಾಹನದಲ್ಲಿ ಕೂರಿಸಿಕೊಂಡಿದ್ದರು. ಹೊಸಹಳ್ಳಿ ರಸ್ತೆಯ ಡಿ-ಮಾರ್ಟ್ ಬಳಿ ತಲುಪಿದಾಗ, ಆರೋಪಿಗಳು ವಾಹನ ನಿಲ್ಲಿಸಿ ಸವಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕು ಹಾಗೂ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ದ್ವಿಚಕ್ರ ವಾಹನ, ಮೊಬೈಲ್ ಮತ್ತು ಪರ್ಸ್ ಅನ್ನು ದೋಚಿದ್ದರು.

ದೂರು ದಾಖಲಾದ ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು, ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕಿ ಅಂದೇ ಇಬ್ಬರು ಆರೋಪಿಗಳನ್ನು ಹುಣಸಮಾರನಹಳ್ಳಿ ಬಳಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದು, ಅವರ ಮಾಹಿತಿ ಮೇರೆಗೆ ಠಾಣಾ ವ್ಯಾಪ್ತಿಯ ಸ್ಪಿನ್ನಿ ಕಂಪನಿಯ ಹಿಂಭಾಗದ ಖಾಲಿ ಜಾಗದಲ್ಲಿ ಬಚ್ಚಿಟ್ಟಿದ್ದ 2.20 ಲಕ್ಷ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನ, ಮೊಬೈಲ್ ಫೋನ್ ಮತ್ತು ದರೋಡೆಗೆ ಬಳಸಿದ್ದ ಚಾಕು ಹಾಗೂ ಹೆಲ್ಮೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಯ ಮಾರ್ಗದರ್ಶನದಡಿ ನಡೆದಿದೆ. ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಮಿಥುನ್ ಕುಮಾರ್ ಜಿ ಕೆ, ದೇವನಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಹರ್ಷ ಮತ್ತು ಚಿಕ್ಕಜಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ. ಆನಂದ್ ಎನ್ ಮತ್ತು ಇತರೆ ಅಧಿಕಾರಿಗಳು ಅತ್ಯಂತ ವೇಗವಾಗಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News