Share News

ಬೀದರ: ಜಿಲ್ಲೆಯನ್ನು ನಶಾಮುಕ್ತಗೊಳಿಸುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯಲ್ಲಿ, ಒಬ್ಬರೇ ಸಾಹಸ ತೋರಿ ಗಾಂಜಾ ಮಾರಾಟಗಾರನನ್ನು ಹಿಡಿದ ಎಎಸ್‌ಐ ಅವರ ಕಾರ್ಯವೈಖರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ನೀಡಿದ್ದಾರೆ.

ಬಗದಲ್ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಮಕ್ಸೂದ್ ಖಾನ್ ಅವರು ತಮ್ಮ ಕರ್ತವ್ಯ ಮುಗಿಸಿ ಬೀದರ ನಗರದ ಕಡೆಗೆ ಬರುತ್ತಿದ್ದರು. ಈ ವೇಳೆ ನಗರದ ಚಿದ್ರಿ ಸಮೀಪ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ. ಕೂಡಲೆ ಕಾರ್ಯಪ್ರವೃತ್ತರಾದ ಅವರು, ಆ ವ್ಯಕ್ತಿಯನ್ನು ಹಿಂಬಾಲಿಸಿ ಸಿನಿಮೀಯ ರೀತಿಯಲ್ಲಿ ಒಬ್ಬರೇ ಹಿಡಿಯುವಲ್ಲಿ ಯಶಸ್ವಿಯಾದರು.

ವಶಕ್ಕೆ ಪಡೆದ ವ್ಯಕ್ತಿಯನ್ನು ಪರಿಶೀಲಿಸಿದಾಗ ಆತನ ಬಳಿ ಗಾಂಜಾ ಇರುವುದು ದೃಢಪಟ್ಟಿದೆ. ಮಕ್ಸೂದ್ ಖಾನ್ ಅವರು ತಕ್ಷಣವೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಆರೋಪಿತನನ್ನು ಹೆಚ್ಚಿನ ತನಿಖೆಗಾಗಿ ಗಾಂಧಿಗಂಜ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಯಾವುದೇ ಹೆಚ್ಚಿನ ಸಿಬ್ಬಂದಿಯ ನೆರವಿಲ್ಲದೆ, ಸ್ವಯಂಪ್ರೇರಿತವಾಗಿ ಮತ್ತು ಧೈರ್ಯದಿಂದ ಆರೋಪಿಯನ್ನು ಸೆರೆಹಿಡಿದ ಮಕ್ಸೂದ್ ಖಾನ್ ಅವರ ಕರ್ತವ್ಯನಿಷ್ಠೆಯನ್ನು ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಪ್ರದೀಪ್ ಗುಂಟಿ (IPS) ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅವರ ಈ ಸಾಹಸಕ್ಕೆ ಇಲಾಖೆಯ ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.

​”ಬೀದರ ಜಿಲ್ಲೆಯನ್ನು ಗಾಂಜಾ ಮುಕ್ತವಾಗಿಸುವ ನಿಟ್ಟಿನಲ್ಲಿ ಪೊಲೀಸರ ಕಾರ್ಯಾಚರಣೆ ನಿರಂತರವಾಗಿ ಮುಂದುವರೆಯಲಿದ್ದು, ಇಂತಹ ದಕ್ಷ ಅಧಿಕಾರಿಗಳ ಸೇವೆ ಇಲಾಖೆಗೆ ಹೆಮ್ಮೆಯ ವಿಷಯ” ಎಂದು ಎಸ್‌ಪಿ ಪ್ರದೀಪ್ ಗುಂಟಿ ಅವರು ತಿಳಿಸಿದ್ದಾರೆ.

 


Share News