ಕಾರವಾರ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸರಬರಾಜನ್ನು ಸಂಪೂರ್ಣವಾಗಿ ನಿಯಂತ್ರಿಸಲು ಅನುಮಾನಾಸ್ಪದವಾಗಿ ಕಂಡುಬರುವ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ಮೇಲೆ ಅನಿರೀಕ್ಷಿತ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಎನ್‌ಕಾರ್ಡ್ (NCORD) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾದಕ ವಸ್ತು ಸೇವನೆ ಪ್ರಕರಣಗಳಲ್ಲಿ ಹೆಚ್ಚಾಗಿ 18 ರಿಂದ 35 ವರ್ಷದೊಳಗಿನ ಯುವಜನತೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅವರು ಶಿಕ್ಷಣ ಇಲಾಖೆಗೆ ತಿಳಿಸಿದರು.
ಮೆಡಿಕಲ್ ಶಾಪ್‌ಗಳಿಗೆ ಎಚ್ಚರಿಕೆ:
ಜಿಲ್ಲೆಯ ಯಾವುದೇ ಮೆಡಿಕಲ್ ಶಾಪ್‌ಗಳಲ್ಲಿ ವೈದ್ಯರ ಅಧಿಕೃತ ಸಲಹಾ ಚೀಟಿ (Prescription) ಇಲ್ಲದೆ ಔಷಧಗಳನ್ನು ನೀಡಬಾರದು.
ಈ ನಿಯಮದ ಕುರಿತು ಪ್ರತಿಯೊಂದು ಔಷಧಾಲಯಗಳಲ್ಲಿ ಕಡ್ಡಾಯವಾಗಿ ಭಿತ್ತಿಪತ್ರಗಳನ್ನು ಅಳವಡಿಸಬೇಕು.
ನಿಯಮ ಉಲ್ಲಂಘಿಸಿ ಔಷಧ ವಿತರಿಸುವ ಶಾಪ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಔಷಧ ನಿಯಂತ್ರಕರಿಗೆ ನಿರ್ದೇಶನ ನೀಡಿದರು.
ಮಾದಕ ವಸ್ತುಗಳ ಸಂಗ್ರಹ ಹಾಗೂ ಸರಬರಾಜು ಕುರಿತು ಮಾಹಿತಿ ನೀಡಲು ಅಭಿವೃದ್ಧಿಪಡಿಸಲಾಗಿರುವ ‘ಡ್ರಗ್ ಫ್ರೀ ಕರ್ನಾಟಕ’ ಮೊಬೈಲ್ ಅಪ್ಲಿಕೇಶನ್ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು. ಸಮಿತಿಯ ಎಲ್ಲಾ ಸದಸ್ಯ ಇಲಾಖೆಗಳು ಪ್ರತಿ ತಿಂಗಳು ನಡೆಸಿದ ತಪಾಸಣೆಯ ಪ್ರಗತಿ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಆದೇಶಿಸಿದರು.
ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು, “2026ರಲ್ಲಿ ಇದುವರೆಗೆ ಮಾದಕ ವಸ್ತು ಸರಬರಾಜಿನ 8 ಪ್ರಕರಣಗಳಲ್ಲಿ 14 ಮಂದಿಯನ್ನು ಬಂಧಿಸಿ, ₹1,49,500 ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಮಾದಕ ವಸ್ತು ಸೇವನೆಯ 97 ಪ್ರಕರಣಗಳಲ್ಲಿ 112 ಮಂದಿಯನ್ನು ಬಂಧಿಸಲಾಗಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಪೊಲೀಸ್, ಆರೋಗ್ಯ, ಶಿಕ್ಷಣ, ಬಂದರು ಹಾಗೂ ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.