Share News

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಉಷ್ಣ ಅಲೆ (Heat Wave) ಮುಂದುವರಿಯುತ್ತಿರುವ ಬೆನ್ನಲ್ಲೇ, ಹವಾಮಾನ ಇಲಾಖೆಯು ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ನೀಡಿದೆ. ನಿನ್ನೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಸುರಿದ ಮಳೆಯು ಜನರಿಗೆ ಸುಡು ಬಿಸಿಲಿನಿಂದ ಕೊಂಚ ನೆಮ್ಮದಿ ನೀಡಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂದಿನ 2-3 ದಿನಗಳ ಕಾಲ ಆಲಿಕಲ್ಲು ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. ವಿಶೇಷವಾಗಿ ರಾಯಚೂರು, ಬಾಗಲಕೋಟೆ, ಯಾದಗಿರಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪ್ರತಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಸಹಿತ ಭಾರಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.

ಕಳೆದ ಹಲವು ದಿನಗಳಿಂದ ಹೀಟ್ ವೇವ್ ಅಲರ್ಟ್‌ನಲ್ಲಿದ್ದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ:

​ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ವಿಜಯನಗರ: ಗುಡುಗು ಹಾಗೂ ಸಿಡಿಲು ಸಹಿತ ಮಳೆಯಾಗಲಿದೆ.

​ಕೊಡಗು, ಕೋಲಾರ ಮತ್ತು ಮೈಸೂರು: ಸಾಧಾರಣ ಮಳೆಯೊಂದಿಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.

ಬೆಂಗಳೂರಿನ ಕೆಲವು ಭಾಗಗಳಲ್ಲಿ ನಿನ್ನೆ ಸಂಜೆ ಮಳೆಯಾಗಿದ್ದರೂ, ನಗರದ ಇನ್ನುಳಿದ ಭಾಗಗಳಲ್ಲಿ ಬಿಸಿ ಗಾಳಿಯ ತೀವ್ರತೆ ಹೆಚ್ಚಿದೆ. ಮಳೆ ಬಾರದ ಪ್ರದೇಶಗಳಲ್ಲಿ ಜನ ಹೈರಾಣಾಗಿದ್ದು, ಸಾಧಾರಣ ಮಳೆಯ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.


Share News