Share News

ನಂಜನಗೂಡು: ಪ್ರಯಾಣಿಕರ ವಿಶ್ರಾಂತಿಗಾಗಿ ಕೋಟಿಗಟ್ಟಲೆ ವೆಚ್ಚ ಮಾಡಿ ನಿರ್ಮಿಸುವ ಬಸ್ ನಿಲ್ದಾಣಗಳು ಇಂದು ಕುಡುಕರ ಅಡ್ಡೆಯಾಗಿ ಪರಿವರ್ತನೆಯಾಗುತ್ತಿವೆ. ಇದಕ್ಕೆ ತಾಜಾ ಉದಾಹರಣೆ ನಂಜನಗೂಡು ತಾಲೂಕಿನ ಮಾದನಹಳ್ಳಿ ಬಸ್ ನಿಲ್ದಾಣ.

ಹಗಲಿನಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯುವ ಈ ನಿಲ್ದಾಣ, ಸೂರ್ಯ ಮುಳುಗುತ್ತಿದ್ದಂತೆ ಕುಡುಕರ ಪಾಲಿಗೆ ‘ಹಾಟ್ ಸ್ಪಾಟ್’ ಆಗುತ್ತಿದೆ. ರಾತ್ರಿಯಿಡೀ ಇಲ್ಲಿ ಮದ್ಯದ ಪಾರ್ಟಿಗಳು ನಡೆಯುತ್ತಿದ್ದು, ಬೆಳ್ಳಂಬೆಳಿಗ್ಗೆ ಬರುವ ಪ್ರಯಾಣಿಕರಿಗೆ ಇಲ್ಲಿ ಸ್ವಾಗತ ಕೋರುವುದು ಖಾಲಿ ಮದ್ಯದ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ಲೋಟಗಳು! ನಿಲ್ದಾಣದ ತುಂಬೆಲ್ಲಾ ರಾಶಿ ರಾಶಿ ಮದ್ಯದ ಪ್ಯಾಕೆಟ್‌ಗಳು ಬಿದ್ದಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.

ಬಸ್ಸಿಗಾಗಿ ಕಾಯಲು ನಿಲ್ದಾಣಕ್ಕೆ ಹೋದರೆ ಅಲ್ಲಿನ ಗಬ್ಬು ವಾಸನೆ ಮತ್ತು ಬಾಟಲಿಗಳ ರಾಶಿಯನ್ನು ನೋಡಿ ಕುಳಿತುಕೊಳ್ಳಲು ಅಸಹ್ಯವಾಗುತ್ತದೆ. ಮಹಿಳೆಯರು ಮತ್ತು ಮಕ್ಕಳು ಈ ನಿಲ್ದಾಣದ ಒಳಗೆ ಹೋಗಲು ಭಯಪಡುವಂತಾಗಿದೆ,” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣದ ನಿರ್ವಹಣೆ ಮಾಡಬೇಕಾದ ಸಾರಿಗೆ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಈ ಬಗ್ಗೆ ಕಣ್ಣಿದ್ದೂ ಕುರುಡಾದಂತೆ ವರ್ತಿಸುತ್ತಿವೆ. ಅಧಿಕಾರಿಗಳ ಈ ಉದಾಸೀನ ಮನೋಭಾವವೇ ಕುಡುಕರಿಗೆ ಅಕ್ರಮ ಚಟುವಟಿಕೆ ನಡೆಸಲು ಪರವಾನಗಿ ನೀಡಿದಂತಾಗಿದೆ ಎಂಬುದು ಸಾರ್ವಜನಿಕರ ಆರೋಪ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಮಾದನಹಳ್ಳಿ ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡಬೇಕಿದೆ. ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ನಿಲ್ದಾಣದ ಶುಚಿತ್ವಕ್ಕೆ ಆದ್ಯತೆ ನೀಡಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 


Share News