ರಾಜ್ಯಾದ್ಯಂತ ಇರುವ ವ್ಯಾಯಾಮ ಶಾಲೆ (ಜಿಮ್)ಗಳಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ನಿಷೇಧಿತ ಸ್ಟೆರಾಯ್ಡ್ ಗಳ ಬಳಕೆ ಹಾಗೂ ಪುಂಡ ಪೋಕರಿಗಳ ಅನಧಿಕೃತ ಚಟುವಟಿಕೆಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ (DG&IGP) ಅಧಿಕೃತ ಪತ್ರ ಬರೆದಿದ್ದಾರೆ. ಜಿಮ್ ಸಂಸ್ಕೃತಿಯ ಮರೆಯಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ.
ಇತ್ತೀಚೆಗೆ ಹಾಸನದ ಕುವೆಂಪು ನಗರದಲ್ಲಿರುವ ‘ಎಂ ಜೆ ಫಿಟ್ನೆಸ್ ಜಿಮ್’ನಲ್ಲಿ ವ್ಯಾಯಾಮ ಮಾಡುವ ವೇಳೆಯಲ್ಲಿ ಭುಜ ತಾಗಿತು ಎನ್ನುವ ಅತ್ಯಂತ ಕ್ಷುಲ್ಲಕ ಕಾರಣಕ್ಕಾಗಿ ವರುಣ್ ಎಂಬಾತ ತನ್ನದೇ ಸಹಪಾಠಿ ಕೀರ್ತನ್ ಎಂಬುವವರ ತಲೆಗೆ ಅತ್ಯಂತ ಬಲವಾಗಿ ಹೊಡೆದಿದ್ದನು. ಈ ಅಮಾನವೀಯ ಹಲ್ಲೆಯಿಂದಾಗಿ ಕೀರ್ತನ್ ಪ್ರಸ್ತುತ ಕೋಮಾ ಸ್ಥಿತಿ ತಲುಪಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿತ್ತು. ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಈ ಭೀಕರ ಘಟನೆಯನ್ನು ಉಲ್ಲೇಖಿಸಿ ಡಿಜಿಪಿಗೆ ಪತ್ರ ಬರೆಯಲಾಗಿದೆ.
ಉತ್ತಮ ಆರೋಗ್ಯ ಮತ್ತು ಸದೃಢ ದೇಹ ಹೊಂದಲು ಯುವಕರು ಜಿಮ್ಗಳಿಗೆ ಬಂದು ನೈಸರ್ಗಿಕ ಪಾನೀಯ ಮತ್ತು ಪ್ರೋಟೀನ್ಗಳನ್ನು ಸೇವಿಸುತ್ತಾ ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಕೀರ್ತಿ ತಂದಿರುವುದು ಅವಿಸ್ಮರಣೀಯ. ಆದರೆ, ಇತ್ತೀಚೆಗೆ ಕೆಲವು ಯುವಕರು ಅಡ್ಡದಾರಿಯಲ್ಲಿ ಬೇಗನೆ ಮೈಕಟ್ಟು ಹೊಂದಲು ಪೂರ್ವ ವ್ಯಾಯಾಮ ಪೂರಕಗಳು (Pre-workout supplements), ಮಾದಕ ವಸ್ತುಗಳು ಹಾಗೂ ಅಪಾಯಕಾರಿ ಸ್ಟೆರಾಯ್ಡ್ಗಳನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಅವರು ಮನುಷ್ಯತ್ವ ಕಳೆದುಕೊಂಡು ಇತರರ ಮೇಲೆ ಮೃಗೀಯವಾಗಿ ವರ್ತಿಸುತ್ತಿದ್ದಾರೆ. ಇನ್ನು ಕೆಲವು ಪುಂಡರು ತಮಗೆ ಗೌರವ ಸಿಗಲಿ ಎಂಬ ತಪ್ಪು ಮನೋಭಾವನೆಯಿಂದ ಸಹಪಾಠಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಹಾಗೂ ಜಿಮ್ಗಳಿಗೆ ಬರುವ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿರುವುದು ವರದಿಯಾಗುತ್ತಿದೆ.
ಕೆಲವು ಜಿಮ್ಗಳಲ್ಲಿ ಮಾಲೀಕರು ಮತ್ತು ತರಬೇತುದಾರರೇ (Gym Trainers) ವ್ಯಾಯಾಮಕ್ಕೆ ಬರುವ ಯುವಕರಿಗೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಹೆಚ್ಚಿಸಲು ಸ್ಟೆರಾಯ್ಡ್ ಇಂಜೆಕ್ಟ್ ಮಾಡುವುದು ಮತ್ತು ಮಾದಕ ವಸ್ತುಗಳನ್ನು ಸೇವಿಸಲು ಪ್ರೇರೇಪಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು ಮುಂದಾಗುವ ಅಪರಾಧಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.
ರಾಜ್ಯಾದ್ಯಂತ ಜಿಮ್ಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸುವಂತೆ ಪತ್ರದಲ್ಲಿ ಕೋರಲಾಗಿದೆ:
ಸಿಸಿಟಿವಿ ಕಡ್ಡಾಯ: ರಾಜ್ಯದ ಎಲ್ಲಾ ಜಿಮ್ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಆಯಾ ಠಾಣಾಧಿಕಾರಿಗಳು ಭೇಟಿ ನೀಡಿ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
ನಿಷೇಧಿತ ಪದಾರ್ಥಗಳಿಗೆ ಬ್ರೇಕ್: ಮಾದಕ ವಸ್ತು, ಸ್ಟೆರಾಯ್ಡ್ ಹಾಗೂ ಇನ್ನಿತರ ನಿಷೇಧಿತ ಪದಾರ್ಥಗಳ ಬಳಕೆಗೆ ಹಾಗೂ ಬಳಸುವವರಿಗೆ ಜಿಮ್ಗಳಲ್ಲಿ ಪ್ರವೇಶ ನೀಡಬಾರದು ಮತ್ತು ಸೇವಿಸಲು ಪ್ರೇರೇಪಿಸಬಾರದು.
ಶಾಶ್ವತ ಸೀಲ್ ಡೌನ್: ಜಿಮ್ಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಅಥವಾ ಅನಧಿಕೃತ ಚಟುವಟಿಕೆಗಳು ಕಂಡುಬಂದಲ್ಲಿ, ತಕ್ಷಣವೇ ಠಾಣೆಗೆ ಮಾಹಿತಿ ನೀಡಬೇಕು. ತಪ್ಪು ಎಸಗಿದ ಜಿಮ್ಗಳನ್ನು ಶಾಶ್ವತವಾಗಿ ಮುಚ್ಚಿಸಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ನಿರಂತರ ನಿಗಾ: ಆಯಾ ವ್ಯಾಪ್ತಿಯ ಪೊಲೀಸರು ಕಾಲಕಾಲಕ್ಕೆ ಜಿಮ್ಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡಲು ಪ್ರಾಧಿಕಾರದ ಸದಸ್ಯರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಸದೃಢ ದೇಹ ಮತ್ತು ಉತ್ತಮ ಆರೋಗ್ಯದ ತಾಣವಾಗಬೇಕಿದ್ದ ಜಿಮ್ಗಳು ಇಂದು ಸ್ಟೆರಾಯ್ಡ್ ಮಾಫಿಯಾ ಹಾಗೂ ಪುಂಡರ ಅಡ್ಡೆಯಾಗುತ್ತಿರುವುದು ಆತಂಕಕಾರಿ ವಿದ್ಯಮಾನವಾಗಿದೆ. ಕ್ಷುಲ್ಲಕ ಕಾರಣಕ್ಕೆ ಸಹಪಾಠಿಯನ್ನೇ ಕೋಮಾ ಸ್ಥಿತಿಗೆ ತಳ್ಳಿದ ಹಾಸನದ ಘಟನೆ ಕಣ್ಣು ತೆರೆಸುವಂತದ್ದಾಗಿದೆ. ಪೊಲೀಸ್ ದೂರುಗಳ ಪ್ರಾಧಿಕಾರದ ಈ ನಡೆ ಅತ್ಯಂತ ಸ್ವಾಗತಾರ್ಹವಾಗಿದ್ದು, ಪೊಲೀಸ್ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತವಾಗಿ ಜಿಮ್ಗಳ ಮೇಲೆ ಕಠಿಣ ನಿಗಾವಹಿಸಬೇಕಿದೆ.
