ತಿರುಚಿ (ತಮಿಳುನಾಡು): ಪ್ರೀತಿ ಮತ್ತು ನಂಬಿಕೆಯಿಂದ ಕಟ್ಟಿದ ಸುಂದರ ಸಂಸಾರವೊಂದು ಕ್ಷಣಿಕ ಸುಖ ಹಾಗೂ ನಂಬಿಕೆ ದ್ರೋಹದ ಕಾರಣಕ್ಕೆ ಸರ್ವನಾಶವಾಗಿರುವ ಭೀಕರ ಘಟನೆಯೊಂದು ತಮಿಳುನಾಡಿನ ತಿರುಚಿಯಲ್ಲಿ ನಡೆದಿದೆ. ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿಯೊಬ್ಬ ಆಕೆಯನ್ನು ಕೊಲೆ ಮಾಡಿ, ಕೃತ್ಯ ಒಪ್ಪಿಕೊಂಡು ಜೈಲು ಪಾಲಾಗಿದ್ದಾನೆ.
ಸ್ಥಳೀಯ ನಿವಾಸಿ ರಾಜಾ ಆಧ್ವಿಕ್ ದೇವ್ ಎಂಬಾತ ತನ್ನ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಸುಂದರ ಜೀವನ ನಡೆಸುತ್ತಿದ್ದ. ಹೆಂಡತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ರಾಜಾಗೆ ಇತ್ತೀಚಿನ ದಿನಗಳಲ್ಲಿ ಆಕೆಯ ನಡವಳಿಕೆಯಲ್ಲಿ ತೀವ್ರ ಬದಲಾವಣೆ ಕಂಡುಬಂದಿತ್ತು. ಪತ್ನಿಯು ‘ಜೋಸೆಫ್’ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರವಾಗಿ ಪತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಆರಂಭಿಸಿದ್ದಳು ಎನ್ನಲಾಗಿದೆ.
ದಿನಕಳೆದಂತೆ ಪತ್ನಿಯ ಮೇಲಿನ ಅನುಮಾನ ಬಲವಾಗಿ, ಕೊನೆಗೆ ಆಕೆ ತನ್ನ ಪ್ರೇಮಿ ಜೋಸೆಫ್ ಜೊತೆಗಿದ್ದಾಗ ಪತಿ ರಾಜಾ ಆಧ್ವಿಕ್ ದೇವ್‌ಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಕಣ್ಣೆದುರೇ ಹೆಂಡತಿ ಎಸಗಿದ ನಂಬಿಕೆ ದ್ರೋಹವನ್ನು ತಡೆಯಲಾರದೆ ಆಕ್ರೋಶಗೊಂಡ ರಾಜಾ, ಪತ್ನಿಯನ್ನೇ ಕೊಲೆ ಮಾಡಿದ್ದಾನೆ.
ಘಟನೆ ಬಳಿಕ ತಾನು ಮಾಡಿದ ಕೃತ್ಯವನ್ನು ವಿಡಿಯೋ ರೆಕಾರ್ಡ್ ಮಾಡಿ ಅದರಲ್ಲಿ ಒಪ್ಪಿಕೊಂಡಿರುವ ಪತಿ, ಸದ್ಯ ಪೊಲೀಸರಿಗೆ ಶರಣಾಗಿದ್ದು ಜೈಲು ಪಾಲಾಗಿದ್ದಾನೆ. ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಇಡೀ ಘಟನೆಯಲ್ಲಿ ಅತ್ಯಂತ ಹೃದಯವಿದ್ರಾವಕ ಸಂಗತಿಯೆಂದರೆ ಆ ದಂಪತಿಯ ಪುಟ್ಟ ಮಗುವಿನ ಸ್ಥಿತಿ. ಯಾವುದೇ ತಪ್ಪು ಮಾಡದ ಮುಗ್ಧ ಮಗುವಿನ ಭವಿಷ್ಯ ಈಗ ಸಂಪೂರ್ಣ ಕತ್ತಲಿಗೆ ತಳ್ಳಲ್ಪಟ್ಟಿದೆ. ಹೆತ್ತ ತಾಯಿ ಸಾವನ್ನಪ್ಪಿದ್ದರೆ, ತಂದೆ ಕೊಲೆ ಆರೋಪಿಯಾಗಿ ಜೈಲು ಸೇರಿದ್ದಾನೆ. ಹೆತ್ತವರ ತಾತ್ಕಾಲಿಕ ಆಕರ್ಷಣೆ ಮತ್ತು ಆತುರದ ಕೋಪದ ನಿರ್ಧಾರಗಳು ಇಂದು ಒಂದು ಮಗುವನ್ನು ಅನಾಥವಾಗಿಸಿ ಬೀದಿಗೆ ತಂದು ನಿಲ್ಲಿಸಿದೆ.
ಗಂಡ-ಹೆಂಡತಿಯ ನಡುವಿನ ನಂಬಿಕೆ ಮುರಿದಾಗ, ಅದರ ಭೀಕರ ಪರಿಣಾಮ ಇಡೀ ಕುಟುಂಬವನ್ನು ಹೇಗೆ ಸರ್ವನಾಶ ಮಾಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತಾತ್ಕಾಲಿಕ ಕಾಮನೆಗಳಿಗೆ ಮರುಳಾಗಿ ಇಡೀ ಸಂಸಾರವನ್ನು ದುರಂತಕ್ಕೆ ತಳ್ಳುವ ಮುನ್ನ, ತಮ್ಮನ್ನು ನಂಬಿರುವ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಈ ಘಟನೆ ಇಂದಿನ ಸಮಾಜಕ್ಕೆ ದೊಡ್ಡ ಪಾಠವಾಗಿ ನೆನಪಿಸಿದೆ.