ಆನೇಕಲ್: ರಾಜಧಾನಿ ಬೆಂಗಳೂರಿನ ಪ್ರಕೃತಿ ಪ್ರಿಯರಿಗೆ ಹಾಗೂ ವನ್ಯಜೀವಿ ಆಸಕ್ತರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ (BBP) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಉದ್ಯಾನವನಕ್ಕೆ ಆಗಮಿಸಿರುವ ಹೊಸ ಅತಿಥಿಗಳಾದ ದಕ್ಷಿಣ ಆಫ್ರಿಕಾದ ಚೀತಾಗಳು, ಮುದ್ದಾದ ಜೀಬ್ರಾ ಮತ್ತು ನೀರುಕುದುರೆ ಮರಿಗಳು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದ್ದು, ಪ್ರವಾಸಿಗರ ಆಕರ್ಷಣೆಯನ್ನು ಇಮ್ಮಡಿಗೊಳಿಸಿವೆ.
ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟ ಉದ್ಯಾನವನಕ್ಕೆ ತರಲಾಗಿದ್ದ ಚೀತಾಗಳು ತಮ್ಮ ಕಡ್ಡಾಯ ಕ್ವಾರಂಟೈನ್ (ದಿಗ್ಬಂಧನ) ಅವಧಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿವೆ. ಪ್ರಾಣಿ ಆರೈಕೆ ತಂಡ ಹಾಗೂ ಪಶುವೈದ್ಯರ ನಿರಂತರ ಹದ್ದಿನ ಕಣ್ಣಿನ ಕಾವಲಿನಲ್ಲಿ ಇವುಗಳ ಆರೋಗ್ಯ, ಆಹಾರ ಪದ್ಧತಿ ಮತ್ತು ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪಶುವೈದ್ಯಕೀಯ ಮೌಲ್ಯಮಾಪನಗಳ ಬಳಿಕ ಈ ಸುಂದರ ಚೀತಾಗಳನ್ನು ವಿಶಾಲವಾದ ಹೊರಾಂಗಣ ಆವಾಸಸ್ಥಾನಕ್ಕೆ ಬಿಡಲಾಗಿದ್ದು, ಇಂದಿನಿಂದ ಸಾರ್ವಜನಿಕರು ಈ ವೇಗದ ಓಟಗಾರರನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಉದ್ಯಾನವನದ ಜೆಬ್ರಾಗಳ ವಲಯದಲ್ಲೂ ಸದ್ಯ ಸಂಭ್ರಮ ಮನೆಮಾಡಿದೆ. ‘ಕಬಿನಿ’ ಹೆಸರಿನ ಜೆಬ್ರಾ ಮುದ್ದಾದ ಹೆಣ್ಣು ಮರಿಗೆ ಜನ್ಮ ನೀಡಿದೆ. ನೈಸರ್ಗಿಕ ಆವಾಸಸ್ಥಾನವನ್ನು ಹೋಲುವ ವಾತಾವರಣದಲ್ಲಿ ಈ ಕ್ಯೂಟ್ ಮರಿಯು ತಾಯಿಯ ಆರೈಕೆಯಲ್ಲಿ ಅತ್ಯಂತ ಚುರುಕಾಗಿ ಓಡಾಡಿಕೊಂಡಿದೆ. ಈ ಹೊಸ ಅತಿಥಿಯ ಆಗಮನದೊಂದಿಗೆ ಬನ್ನೇರುಘಟ್ಟದಲ್ಲಿರುವ ಜೆಬ್ರಾಗಳ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಈ ಎಲ್ಲಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ, ಉದ್ಯಾನವನದ ‘ದಶ್ಯ’ ಹೆಸರಿನ ಹೆಣ್ಣು ನೀರುಕುದುರೆ (Hippopotamus) ಇತ್ತೀಚೆಗೆ ಮರಿಗೆ ಜನ್ಮ ನೀಡಿದೆ. ನವಜಾತ ಮರಿ ಮತ್ತು ತಾಯಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜೈಲಿನ ಆವರಣದಲ್ಲಿ ಅತ್ಯಂತ ಶಾಂತಿಯುತ ವಾತಾವರಣವನ್ನು ನಿರ್ಮಿಸಲಾಗಿದೆ. ದಶ್ಯ ತನ್ನ ಮರಿಯನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದು, ತಾಯಿ-ಮರಿಯ ಈ ಅಪರೂಪದ ಆಟ ಪ್ರವಾಸಿಗರ ಮನಗೆಲ್ಲುತ್ತಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಂಡುಬಂದಿರುವ ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆಗಳು ಅಲ್ಲಿನ ವೈಜ್ಞಾನಿಕ ಪ್ರಾಣಿ ನಿರ್ವಹಣೆ ಮತ್ತು ವನ್ಯಜೀವಿ ಸಂರಕ್ಷಣೆಯ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಹೊಸ ಅತಿಥಿಗಳನ್ನು ಸ್ವಾಗತಿಸಲು ಮತ್ತು ವನ್ಯಜೀವಿಗಳ ಅದ್ಭುತ ಪ್ರಪಂಚವನ್ನು ಕಣ್ತುಂಬಿಕೊಳ್ಳಲು ಬನ್ನೇರುಘಟ್ಟ ಜೈವಿಕ ಉದ್ಯಾನವನವು ಪ್ರವಾಸಿಗರನ್ನು ಪ್ರೀತಿಯಿಂದ ಆಹ್ವಾನಿಸುತ್ತಿದೆ. ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ಬಯಸುವವರು ತಮ್ಮ ಈ ವೀಕೆಂಡ್ ಟ್ರಿಪ್ ಅನ್ನು ಬನ್ನೇರುಘಟ್ಟಕ್ಕೆ ಪ್ಲಾನ್ ಮಾಡಬಹುದಾಗಿದೆ.