ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಘಟಿತ ಅಪರಾಧ ಕೃತ್ಯಗಳು ಹಾಗೂ ಸರಣಿ ಅಪರಾಧಗಳಲ್ಲಿ ತೊಡಗಿರುವ ಹ್ಯಾಬಿಚುಯಲ್ ಅಫೆಂಡರ್‌ಗಳಿಗೆ (ಪದೇ ಪದೇ ಅಪರಾಧ ಎಸಗುವವರು) ಜಿಲ್ಲಾ ಪೊಲೀಸ್ ಇಲಾಖೆ ಖಡಕ್ ಮುನ್ನೆಚ್ಚರಿಕೆ ನೀಡಿದೆ. ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಬ್ಬರು ಕುಖ್ಯಾತ ರೌಡಿಶೀಟರ್‌ಗಳು ಸೇರಿದಂತೆ ಮೂವರ ವಿರುದ್ಧ ಅತ್ಯಂತ ಕಠಿಣವಾದ ‘ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ’ (KCOCA – ಕೋಕಾ) ಅಡಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ಬಂಧಿಸಲಾಗಿದೆ.
ಮಡಿಕೇರಿಯಲ್ಲಿ ಮಂಗಳವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಆರ್.ಎನ್. ಬಿಂದು ಮಣಿ ಅವರು ಈ ಮಹತ್ವದ ಕಾರ್ಯಾಚರಣೆಯ ವಿವರಗಳನ್ನು ಮಾಧ್ಯಮಗಳಿಗೆ ಹಂಚಿಕೊಂಡರು.
ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೀರ್ಘಕಾಲದಿಂದ ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದ ಇಬ್ಬರು ಸಕ್ರಿಯ ರೌಡಿಶೀಟರ್‌ಗಳಾದ ಪ್ರಮೋದ್ ಮತ್ತು ದರ್ಶನ್ ಎಂಬುವವರ ವಿರುದ್ಧ ಪೊಲೀಸರು ‘ಕೋಕಾ’ ಅಸ್ತ್ರ ಪ್ರಯೋಗಿಸಿದ್ದಾರೆ. ಇವರ ನಿರಂತರ ಗಂಭೀರ ಅಪರಾಧ ಇತಿಹಾಸ ಹಾಗೂ ಸಮಾಜದ ಮೇಲಿನ ಪ್ರಭಾವವನ್ನು ಪರಿಗಣಿಸಿ ಈ ಕಠಿಣ ಕಾನೂನನ್ನು ಜಾರಿಗೊಳಿಸಲಾಗಿದೆ.
ಪ್ರಮೋದ್: ಈತನ ವಿರುದ್ಧ ಒಟ್ಟು 18 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ದರ್ಶನ್: ಈತನ ವಿರುದ್ಧ ಒಟ್ಟು 9 ಕ್ರಿಮಿನಲ್ ಪ್ರಕರಣಗಳಿವೆ.
ಇವರಿಬ್ಬರೂ ಜಂಟಿಯಾಗಿ ಒಟ್ಟು 9 ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ.
ಆರೋಪಿಗಳ ನಿರಂತರ ಅಪರಾಧ ಚಟುವಟಿಕೆಗಳು ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತರುತ್ತಿರುವುದನ್ನು ಮನಗಂಡು ಈ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಸದ್ಯ ಇಬ್ಬರೂ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶರೀಫ್ ಎಂಬಾತನ ವಿರುದ್ಧವೂ ‘ಕೋಕಾ’ ನಿಬಂಧನೆಗಳಡಿ ಪ್ರಕರಣ ದಾಖಲಿಸಲಾಗಿದೆ. ಕಳೆದ 10 ವರ್ಷಗಳಿಂದ ರೌಡಿಶೀಟರ್ ಪಟ್ಟಿಯಲ್ಲಿದ್ದ ಶರೀಫ್ ವಿರುದ್ಧ ಈಗಾಗಲೇ ಕೊಲೆ ಯತ್ನ, ಹಲ್ಲೆ ಸೇರಿದಂತೆ 11 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಈತನ ವಿರುದ್ಧ ಹಲವು ಮುನ್ನೆಚ್ಚರಿಕೆ ಮತ್ತು ಕಾನೂನು ಕ್ರಮಗಳನ್ನು ಕೈಗೊಂಡಿದ್ದರೂ, ತನ್ನ ಹಳೆಯ ಚಾಳಿಯನ್ನು ಬಿಡದೆ ನಿರಂತರವಾಗಿ ಸಂಘಟಿತ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಪೊಲೀಸರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ಎಸ್‌ಪಿ ತಿಳಿಸಿದರು.
ಜಿಲ್ಲೆಯಲ್ಲಿ ರೌಡಿಸಂ, ಹಫ್ತಾ ವಸೂಲಿ ಮತ್ತು ಸಂಘಟಿತ ಅಪರಾಧ ಕೃತ್ಯಗಳ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವವರ ವಿರುದ್ಧ ಇನ್ನು ಮುಂದೆ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಬಿಂದು ಮಣಿ ಅವರು ತೀವ್ರ ಎಚ್ಚರಿಕೆ ನೀಡಿದ್ದಾರೆ.
”ಜಿಲ್ಲೆಯ ಎಲ್ಲಾ ರೌಡಿಶೀಟರ್‌ಗಳ ದೈನಂದಿನ ಚಟುವಟಿಕೆಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹಳೆಯ ಅಪರಾಧಿಗಳು ಸುಧಾರಿಸದೆ ಮತ್ತೆ ಅದೇ ದಾರಿಯಲ್ಲಿ ಮುಂದುವರಿದರೆ, ಅವರ ವಿರುದ್ಧವೂ ಇಂತಹದ್ದೇ ಕಠಿಣ ಕಾನೂನುಗಳನ್ನು ಬಳಸಿ ಜೈಲಿಗಟ್ಟಲು ಹಿಂಜರಿಯುವುದಿಲ್ಲ,” ಎಂದು ಅವರು ಖಡಕ್ ಆಗಿ ನುಡಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಮಾದಕ ದ್ರವ್ಯ (ಡ್ರಗ್ಸ್) ದಂಧೆಯನ್ನು ಬೇರುಸಹಿತ ಕಿತ್ತೊಗೆಯಲು ಜಿಲ್ಲಾ ಪೊಲೀಸ್ ಇಲಾಖೆ ಸಮರ ಸಾರಿದೆ. ಇದರ ಭಾಗವಾಗಿ, ಮಾದಕ ದ್ರವ್ಯಗಳ ಅಕ್ರಮ ಸಾಗಣೆ ತಡೆ ಕಾಯ್ದೆ (PIT NDPS Act) ಅಡಿಯಲ್ಲಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಬಿಂದು ಮಣಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.