Share News

ಆನಂದಪುರ (ಸಾಗರ): ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣೆಯ ದಕ್ಷ ಹಾಗೂ ಸ್ಮಾರ್ಟ್ ಪಿ.ಎಸ್.ಐ ಪ್ರವೀಣ್ ಅವರ ನೇತೃತ್ವದ ತಂಡ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ, ಕಾನೂನುಬಾಹಿರವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಲಾಗಿದೆ.

​ಬಂಧಿತ ಆರೋಪಿಗಳಿಂದ 95 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಜೂನ್ 23, 2026ರಂದು ಮಧ್ಯಾಹ್ನ ಆನಂದಪುರ ಠಾಣಾ ವ್ಯಾಪ್ತಿಯ ಯಡೆಹಳ್ಳಿ ಗ್ರಾಮದಲ್ಲಿ ಪಿ.ಎಸ್.ಐ ಪ್ರವೀಣ್ ಅವರು ಸಿಬ್ಬಂದಿಯೊಂದಿಗೆ ಗಸ್ತು ಕರ್ತವ್ಯದಲ್ಲಿದ್ದರು. ಈ ವೇಳೆ ಸಾಗರ ಕಡೆಯಿಂದ ಆನಂದಪುರ ಕಡೆಗೆ ಬೈಕ್‌ನಲ್ಲಿ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಅವರಿಗೆ ಲಭ್ಯವಾಯಿತು.

ಮಾಹಿತಿ ಸಿಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪಿ.ಎಸ್.ಐ ಪ್ರವೀಣ್ ಅವರು ಸಾಗರದ ಸಹಾಯಕ ಪೊಲೀಸ್ ಅಧೀಕ್ಷಕರಿಗೆ (ASP) ವಿಷಯ ಮುಟ್ಟಿಸಿ, ಅವರ ನಿರ್ದೇಶನದಂತೆ ಅಬಕಾರಿ ಉಪಾಧೀಕ್ಷಕರ ಸಮ್ಮುಖದಲ್ಲಿ ಉಳ್ಳೂರು ಗ್ರಾಮದ ಹೋಟೆಲ್ ಸಮೀಪ ಕಟ್ಟುನಿಟ್ಟಿನ ವಾಹನ ತಪಾಸಣೆ ಕೈಗೊಂಡರು.

​ಮಧ್ಯಾಹ್ನ ಸುಮಾರು 2.15ರ ವೇಳೆಗೆ ಸಾಗರ ಕಡೆಯಿಂದ ಬಂದ ಅನುಮಾನಾಸ್ಪದ ಬೈಕನ್ನು ತಡೆದು ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲಿದ್ದ ಬ್ಯಾಗ್‌ನೊಳಗಿನ ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಬಚ್ಚಿಟ್ಟು ಸಾಗಿಸುತ್ತಿದ್ದ 95 ಗ್ರಾಂ ಗಾಂಜಾ ಪತ್ತೆಯಾಗಿದೆ.

ಅಕ್ರಮ ಗಾಂಜಾ ಜಪ್ತಿ ಮಾಡಿಕೊಂಡಿರುವ ಪೊಲೀಸರು, ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿಗಳಾದ ಮುಜಾಮಿಲ್ ಹಾಗೂ ಹಫೀಜುಲ್ಲಾ ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪಿ.ಎಸ್.ಐ ಪ್ರವೀಣ್ ಮತ್ತು ಸಿಬ್ಬಂದಿಯ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

 


Share News