Share News

ಬೇಲೂರು: ತಾಲ್ಲೂಕಿನ ಹಗರೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಾದ ಕಾಡು ಹಂದಿಗಳನ್ನು ಕಾನೂನುಬಾಹಿರವಾಗಿ ಬೇಟೆಯಾಡಿ, ಅವುಗಳ ಮಾಂಸವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜೂನ್ 21ರಂದು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಾಲಗಾಮೆ ಹೋಬಳಿಯ ಬೈಲಳ್ಳಿ ಗ್ರಾಮದ ನಿವಾಸಿ ರವಿ ಕುಮಾರ್ ಎಂದು ಗುರುತಿಸಲಾಗಿದೆ. ದಾಳಿಯ ವೇಳೆ ಆರೋಪಿಯಿಂದ ಎರಡು ಕಾಡು ಹಂದಿಗಳನ್ನು ಬೇಟೆಯಾಡಿ ಸಂಗ್ರಹಿಸಿದ್ದ ಸುಮಾರು 11 ಕೆ.ಜಿ. ಹಸಿ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಬೇಟೆಗೆ ಬಳಸಿದ್ದ ಒಂದು ಕಿಯಾ ಕಾರು, ಮೂರು ಡಿಬಿಬಿಎಲ್ (DBBL) ಗನ್‌ಗಳು ಹಾಗೂ ಇತರೆ ಬೇಟೆ ಉಪಕರಣಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಹಗರೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ಬೇಟೆ ನಡೆಯುತ್ತಿರುವ ಕುರಿತು ಬೇಲೂರು ವಲಯ ಅರಣ್ಯಾಧಿಕಾರಿಗಳಿಗೆ ಜೂನ್ 21ರಂದು ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ ಹಗರೆ ರಕ್ಷಿತ ಅರಣ್ಯದ ಗಡಿಯಾದ ಹಗರೆ– ಹೊಲಬಗೆರೆ ರಸ್ತೆಯಲ್ಲಿ ಹೊಂಚು ಹಾಕಿ ಭರ್ಜರಿ ದಾಳಿ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.

​ಘಟನೆಗೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡಿರುವ ಅಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ.

​ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಬೇಲೂರು ವಲಯ ಅರಣ್ಯಾಧಿಕಾರಿ (RFO) ಆರ್.ಎಫ್. ಯತೀಶ್, ಉಪ ವಲಯ ಅರಣ್ಯಾಧಿಕಾರಿ (DRFO) ಮೋಹನ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಸತೀಶ್ ಮತ್ತು ಮಂಜುನಾಥ್ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.

 


Share News