Share News

ತುಮಕೂರು: ದೇಶದಲ್ಲಿ ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ತುಮಕೂರಿನಲ್ಲಿ ನಾಲ್ವರು ದಲಿತ ಕಾರ್ಮಿಕರನ್ನು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಬರಿಗೈ, ಬರಿಮೈಯಲ್ಲಿ ಮಲಗುಂಡಿ ಸ್ವಚ್ಛತಾ ಕಾರ್ಯಕ್ಕೆ ಬಳಸಿರುವ ಅತ್ಯಂತ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

​ನಗರದ ಕೆಇಬಿ ಇಂಜಿನಿಯರ್ಸ್‌ ಸಂಘದ ಆವರಣದಲ್ಲಿ ಈ ಕೃತ್ಯ ನಡೆದಿದ್ದು, ಇಂಜಿನಿಯರ್‌ರೊಬ್ಬರ ಸೂಚನೆ ಮೇರೆಗೆ ಕಳೆದ ಮೂರು ದಿನಗಳಿಂದ ಕಾರ್ಮಿಕರು ಶೌಚಗುಂಡಿಯ ಮಲವನ್ನು ಹೊರಗೆ ತೆಗೆದು ಟ್ರ್ಯಾಕ್ಟರ್‌ಗೆ ತುಂಬಿಸುತ್ತಿದ್ದ ದೃಶ್ಯಗಳು ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ (ಸುಮೋಟೋ) ದೂರು ದಾಖಲಾಗಿದೆ.

ತುಮಕೂರಿನ ನಂದೀಶ್‌, ಅರುಣ್‌ ಹಾಗೂ ಮಧುಗಿರಿ ಮೂಲದ ಮೂರ್ತಿ ನಾಯ್ಕ ಮತ್ತು ನವೀನ್‌ ಎಂಬ ನಾಲ್ವರು ಈ ಘಟನೆಯ ಸಂತ್ರಸ್ತರಾಗಿದ್ದಾರೆ. “ನಮ್ಮನ್ನು ಮಣ್ಣು ತುಂಬುವ ಕೆಲಸವೆಂದು ಕರೆದುಕೊಂಡು ಬರಲಾಗಿತ್ತು. ಇಲ್ಲಿಗೆ ಬಂದ ಮೇಲೆ ಇದು ಶೌಚಗುಂಡಿ ಎಂದು ಗೊತ್ತಾಯಿತು. ಹೊಟ್ಟೆಪಾಡಿಗಾಗಿ ವಿಧಿಯಿಲ್ಲದೆ ಒಪ್ಪಿಕೊಂಡು ಕೆಲಸ ಮಾಡಿದ್ದೇವೆ. ಈ ಕೆಲಸ ಮಾಡಬಾರದು ಎಂದು ನಮಗೆ ತಿಳಿದಿರಲಿಲ್ಲ. ಇನ್ನು ಮುಂದೆ ಇಂತಹ ಕೆಲಸಕ್ಕೆ ಕರೆದರೆ ಖಂಡಿತ ಹೋಗುವುದಿಲ್ಲ” ಎಂದು ಸಂತ್ರಸ್ತ ಕಾರ್ಮಿಕರು ಕಣ್ಣೀರಿಡುತ್ತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಾಮಾಜಿಕ ಹೋರಾಟಗಾರ ಜಟ್ಟಿ ಅಗ್ರಹಾರ ನಾಗರಾಜು ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಇತ್ತ ಘಟನೆ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾಗಿರುವ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕಿ ಸೋನಿಯಾ ವರ್ಣೇಕರ್‌ ಅವರು, ಕಟ್ಟಡ ನಿರ್ಮಾಣ ಇಂಜಿನಿಯರ್ ವಿರುದ್ಧ ನಗರ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸಂತ್ರಸ್ತ ಕಾರ್ಮಿಕರಿಗೆ ಸೂಕ್ತ ಪರಿಹಾರ ಒದಗಿಸುವ ಸಂಬಂಧ ಸೋಮವಾರ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಪತ್ರ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ.

ದಲಿತ ಕಾರ್ಮಿಕರನ್ನು ಅಮಾನವೀಯವಾಗಿ ಬಳಸಿಕೊಂಡಿರುವುದನ್ನು ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಮುನಿಸಿಪಲ್‌ ಕಾರ್ಮಿಕರ ಸಂಘ ಹಾಗೂ ಸಿಐಟಿಯು ತೀವ್ರವಾಗಿ ಖಂಡಿಸಿವೆ.

​”ಕೆಲ ಪ್ರಭಾವಿ ವ್ಯಕ್ತಿಗಳು ಈ ಅಮಾನವೀಯ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ಜಿಲ್ಲಾಡಳಿತವು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಪಾಲಿಕೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ತನಿಖೆ ನಡೆಸಿ, ಘಟನೆಯ ಸಾಕ್ಷ್ಯಗಳನ್ನು ಸಂರಕ್ಷಿಸಬೇಕು. ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು” ಎಂದು ಸಂಘಟನೆಗಳು ತೀವ್ರ ಒತ್ತಾಯ ಮಾಡಿವೆ.

 


Share News