ಬೆಂಗಳೂರು: ಪ್ರೀತಿಗೆ ಯಾವುದೇ ಜಾತಿ, ಮತಗಳ ಹಂಗಿಲ್ಲ ಎನ್ನುತ್ತಾರೆ. ಆದರೆ ಪ್ರೀತಿಯ ಹೆಸರಿನಲ್ಲಿ ಜೊತೆಯಾಗಿ ಬದುಕಿ, ಮದುವೆ ಸಮಯಕ್ಕೆ ಜಾತಿಯ ನೆಪವೊಡ್ಡಿ ಕೈಕೊಡುವ ಘಟನೆಗಳು ಸಮಾಜದಲ್ಲಿ ಹೆಚ್ಚುತ್ತಿವೆ. ಅಂತಹದ್ದೇ ಒಂದು ಘಟನೆಯಲ್ಲಿ, ಮದುವೆಯಾಗುವುದಾಗಿ ನಂಬಿಸಿ ಜೊತೆಯಾಗಿ ಸಂಸಾರ ಮಾಡಿದ್ದ ಪ್ರಿಯಕರ ಈಗ ಕೈಕೊಟ್ಟಿದ್ದಾನೆ ಎಂದು ಆರೋಪಿಸಿ ಕಾಸರಗೋಡು ಮೂಲದ ನಿಷ್ಮಾ ಎಂಬ ಯುವತಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆಯ ಹಿನ್ನೆಲೆ:
ಕಾಸರಗೋಡು ಮೂಲದ ನಿಷ್ಮಾ ಹಾಗೂ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಲ್ಲೇಸೋಮಹಳ್ಳಿ ಗ್ರಾಮದ ಸೂರ್ಯ ಎಂಬುವವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪರಿಚಯವಾಗಿದ್ದರು. ಈ ಪರಿಚಯದ ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗಿತ್ತು. ಪಾರ್ಕ್, ಸಿನಿಮಾ ಎಂದು ಸುತ್ತಾಡುತ್ತಿದ್ದ ಈ ಜೋಡಿ, “ಮದುವೆಯಾಗುವವರ ಮೇಲೆ ಇನ್ನು ಎರಡೆರಡು ಬಾಡಿಗೆ ಯಾಕೆ ಕೊಡಬೇಕು?” ಎಂದು ಆಲೋಚಿಸಿ, ಕಳೆದ 6 ತಿಂಗಳಿಂದ ಬೆಂಗಳೂರಿನಲ್ಲಿ ಒಂದೇ ರೂಮಿನಲ್ಲಿ ಗಂಡ-ಹೆಂಡತಿಯಂತೆ ಜೊತೆಯಾಗಿ ವಾಸಿಸುತ್ತಿದ್ದರು.
ಜಾತಿಯ ಅಡ್ಡಿ ಹಾಗೂ ಪ್ರಿಯಕರನ ಪರಾರಿ:
ಈ ಜೋಡಿಯ ಒಡನಾಟದ ವಿಚಾರ ಯುವಕ ಸೂರ್ಯನ ಪೋಷಕರಿಗೂ ತಿಳಿದಿತ್ತು. ಆರಂಭದಲ್ಲಿ ಮನೆಯವರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಎಂದು ಹೇಳಲಾಗಿದೆ. ಆದರೆ, ಯುವತಿಯ ಜಾತಿ ಯಾವುದು ಎಂಬುದು ತಿಳಿಯುತ್ತಿದ್ದಂತೆ ಸೂರ್ಯನ ಮನೆಯವರು ಮದುವೆಗೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಮನೆಯವರ ವಿರೋಧ ಹಾಗೂ ಒತ್ತಡಕ್ಕೆ ಮಣಿದು, ಇಷ್ಟು ದಿನ ಜೊತೆಗಿದ್ದ ನಿಷ್ಮಾನನ್ನು ಕಡೆಗಣಿಸಲು ಸೂರ್ಯ ಮುಂದಾಗಿದ್ದಾನೆ.
ಮದುವೆಗೆ ಮನೆಯವರು ಒಪ್ಪುತ್ತಿಲ್ಲ ಎಂಬ ಕಾರಣ ನೀಡಿ ಸೂರ್ಯ ಕಳೆದ ಸೆಪ್ಟೆಂಬರ್ 24ರಂದು ಮನೆಯಲ್ಲೇ ಮೊಬೈಲ್ ಫೋನ್ ಬಿಟ್ಟು ನಾಪತ್ತೆಯಾಗಿದ್ದಾನೆ. ಇತ್ತ ನಂಬಿ ಬಂದ ಪ್ರಿಯಕರ ಕೈಕೊಟ್ಟಿದ್ದರಿಂದ ದಿಕ್ಕು ತೋಚದ ನಿಷ್ಮಾ ಕಣ್ಣೀರೋತ್ತಾ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಯುವತಿಯ ಆಘಾತಕಾರಿ ಹೇಳಿಕೆ ಹಾಗೂ ಪೊಲೀಸ್ ದೂರು:
“ಗುರುವಾರದವರೆಗೆ ಕಾಯುತ್ತೇನೆ, ಒಂದು ವೇಳೆ ಆತ ಬರದಿದ್ದರೆ ನಾನು ಈ ಭೂಮಿ ಮೇಲೆ ಇರುವುದಿಲ್ಲ” ಎಂದು ನೊಂದ ಯುವತಿ ನಿಷ್ಮಾ ಆಘಾತಕಾರಿ ಹೇಳಿಕೆ ನೀಡಿದ್ದು, ತಮಗೆ ನ್ಯಾಯ ಕೊಡಿಸುವಂತೆ ಕೋರಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪ್ರೀತಿ ಮಾಡುವಾಗ ಅಥವಾ ಲಿವ್-ಇನ್ (Live-in) ಸಂಬಂಧದಲ್ಲಿರುವಾಗ ಯೋಚಿಸದ ಯುವಕರು, ಕೊನೆಗೆ ಮದುವೆ ಸಮಯಕ್ಕೆ ಕೈಕೊಟ್ಟು ಯುವತಿಯರ ಬದುಕಿನೊಂದಿಗೆ ಚೆಲ್ಲಾಟವಾಡುವುದು ಎಷ್ಟು ಸರಿ ಎಂಬ ಗಂಭೀರ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
Arakshakara Times Media
Related posts
