Share News

ಬೆಂಗಳೂರು (ಬಾಗಲಗುಂಟೆ): ಜಾಲಹಳ್ಳಿ ಕ್ರಾಸ್‌ನಿಂದ ಆಟೋದಲ್ಲಿ ಪ್ರಯಾಣಿಸುವಾಗ ಸುಮಾರು ₹40,000 ಮೌಲ್ಯದ ಬೆಳ್ಳಿ ವಸ್ತುಗಳನ್ನು ತಪ್ಪಿ ಬಿಟ್ಟು ಬಂದಿದ್ದ ಮಹಿಳೆಗೆ, ಬಾಗಲಗುಂಟೆ ಪೊಲೀಸ್ ಠಾಣೆಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಳ್ಳಿ ಆಭರಣಗಳನ್ನು ಸುರಕ್ಷಿತವಾಗಿ ಮರಳಿಸಿರುವ ಶ್ಲಾಘನೀಯ ಘಟನೆ ನಡೆದಿದೆ.

​ಘಟನೆಯ ವಿವರ:

ಮಲ್ಲಸಂದ್ರ ನಿವಾಸಿ ಶ್ರೀಮತಿ ವೆಲ್ಲಿ (ಕೋಂ ಕಿಟ್ಟಿ) ಎಂಬುವವರು ಜಾಲಹಳ್ಳಿ ಕ್ರಾಸ್‌ನಿಂದ ಆಟೋ ಹತ್ತಿ ತಮ್ಮ ನಿವಾಸವಿರುವ ಮಲ್ಲಸಂದ್ರಕ್ಕೆ ಬಂದಿದ್ದಾರೆ. ಈ ವೇಳೆ ಆಟೋದಲ್ಲೇ ಸುಮಾರು ₹40,000 ಮೌಲ್ಯದ ತಮ್ಮ ಬೆಳ್ಳಿ ವಸ್ತುಗಳನ್ನು ಮರೆತು ಬಿಟ್ಟು ಇಳಿದಿದ್ದರು. ಬಳಿಕ ವಸ್ತುಗಳು ಕಳೆದುಹೋಗಿರುವುದು ತಿಳಿಯುತ್ತಿದ್ದಂತೆಯೇ ಅವರು ತಕ್ಷಣ ಬಾಗಲಗುಂಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದರು.

​ದೂರು ಸ್ವೀಕರಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಧುಕುಮಾರ್ ಹಾಗೂ ಚೇತನ್ ಅವರು, ಸತತ ಪ್ರಯತ್ನ ನಡೆಸಿ ಸದರಿ ಆಟೋ ಮತ್ತು ಅದರ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಚಾಲಕನನ್ನು ಬೆಳ್ಳಿ ವಸ್ತುಗಳ ಸಮೇತ ಠಾಣೆಗೆ ಕರೆತಂದು ಹಾಜರುಪಡಿಸಲಾಗಿದೆ.

​ಬಳಿಕ ಬಾಗಲಗುಂಟೆ ಪೊಲೀಸ್ ಠಾಣೆಯ ಪಿಎಸ್‌ಐ (PSI) ಶ್ರೀ ಗಂಗಾಧರ್ ಅವರ ಸಮಕ್ಷಮದಲ್ಲಿ, ವಶಪಡಿಸಿಕೊಂಡ ₹40,000 ಮೌಲ್ಯದ ಬೆಳ್ಳಿ ವಸ್ತುಗಳನ್ನು ವಾರಸುದಾರರಾದ ಶ್ರೀಮತಿ ವೆಲ್ಲಿ ಅವರಿಗೆ ಅಧಿಕೃತವಾಗಿ ಹಿಂತಿರುಗಿಸಲಾಯಿತು. ಸಮಯಪ್ರಜ್ಞೆ ಹಾಗೂ ಕ್ಷಿಪ್ರ ಕಾರ್ಯಾಚರಣೆ ಮೂಲಕ ತಮ್ಮ ವಸ್ತುಗಳನ್ನು ಹುಡುಕಿಕೊಟ್ಟ ಬಾಗಲಗುಂಟೆ ಪೊಲೀಸರಿಗೆ ಸಂತ್ರಸ್ತ ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ.


Share News