Share News

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಾಯಿಯಿಂದ ಬೇರ್ಪಟ್ಟು ಅಲೆದಾಡುತ್ತಿದ್ದ ಸುಮಾರು ಒಂದು ತಿಂಗಳ ಆನೆಮರಿಯನ್ನು ಸುರಕ್ಷತೆ ಹಾಗೂ ಹೆಚ್ಚಿನ ಆರೈಕೆಯ ದೃಷ್ಟಿಯಿಂದ ಮೈಸೂರು ಮೃಗಾಲಯಕ್ಕೆ ಸಾಫ್ಟ್‌ ಆಗಿ ರವಾನಿಸಲಾಗಿದೆ.

​ಅಜ್ಜಿಪುರ ಸಮೀಪದ ಕಣಿವೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯ ಮುಖ್ಯ ರಸ್ತೆಯಲ್ಲಿ ಭಾನುವಾರದಿಂದ ಈ ಆನೆಮರಿ ತಾಯಿಗಾಗಿ ಹುಡುಕಾಡುತ್ತಾ ಅಲೆದಾಡುತ್ತಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗಿಳಿದು, ಮರಿಯನ್ನು ತಾಯಿ ಆನೆ ಅಥವಾ ಕಾಡಾನೆಗಳ ಹಿಂಡಿನೊಂದಿಗೆ ಸೇರಿಸಲು ನಿರಂತರ ಪ್ರಯತ್ನ ನಡೆಸಿದರು. ಆದರೆ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಆನೆಗಳ ಸುಳಿವು ಸಿಗಲಿಲ್ಲ.

​ಆನೆಮರಿಯ ಜೀವಕ್ಕೆ ಅಪಾಯವಾಗದಂತೆ ತಡೆದು, ಸೂಕ್ತ ಪೋಷಣೆ ಹಾಗೂ ವೈದ್ಯಕೀಯ ಆರೈಕೆ ಒದಗಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಸುರಕ್ಷಿತವಾಗಿ ಮೈಸೂರು ಮೃಗಾಲಯಕ್ಕೆ ತಲುಪಿಸಿದ್ದಾರೆ. ಸದ್ಯ ಆನೆಮರಿಯ ಆರೋಗ್ಯ ಸ್ಥಿತಿಯ ಮೇಲೆ ಅರಣ್ಯ ಇಲಾಖೆ ಹಾಗೂ ಮೃಗಾಲಯದ ಸಿಬ್ಬಂದಿ ತೀವ್ರ ನಿಗಾ ವಹಿಸಿದ್ದಾರೆ.


Share News