Share News

ದೇವನಹಳ್ಳಿ: ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ಹೊರರಾಜ್ಯದ ಕಾರ್ಮಿಕರನ್ನೇ ಗುರಿಯಾಗಿಸಿಕೊಂಡು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

​ಬಂಧಿತರಿಂದ ಬರೋಬ್ಬರಿ 3 ಕೆಜಿ 610 ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಲಕ್ಷಾಂತರ ರೂಪಾಯಿ ಎಂದು ಅಂದಾಜಿಸಲಾಗಿದೆ.

ದೇವನಹಳ್ಳಿ ತಾಲೂಕಿನ ಪೋಲನಹಳ್ಳಿ ಕೆಐಎಡಿಬಿ (KIADB) ಕೈಗಾರಿಕಾ ಪ್ರದೇಶದ ಪ್ರಮುಖ ಎಕ್ಸೈಡ್ ಫ್ಯಾಕ್ಟರಿ ಬಳಿ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಚನ್ನರಾಯಪಟ್ಟಣ ಪೊಲೀಸರು ಜಂಟಿ ದಾಳಿ ನಡೆಸಿ, ಗಾಂಜಾ ಮಾರಾಟ ಜಾಲದ ಪ್ರಮುಖ ಆರೋಪಿಗಳಾದ ಸಮೀರ್ (30) ಹಾಗೂ ಪ್ರಜ್ವಲ್ (19) ಎಂಬುವವರನ್ನು ಮಾರುಕಟ್ಟೆ ಬೆಲೆಯ ಗಾಂಜಾ ಸಹಿತ ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

​ಬಂಧಿತ ಆರೋಪಿಗಳ ವಿರುದ್ಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ನಿಯಂತ್ರಣ ಕಾಯ್ದೆ (NDPS Act) ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ದೊಡ್ಡಬಳ್ಳಾಪುರ ಉಪವಿಭಾಗದ ದಕ್ಷ ಡಿವೈಎಸ್‌ಪಿ (DySP) ಪಾಂಡುರಂಗ ಅವರ ಸಮರ್ಥ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

ಕೈಗಾರಿಕಾ ವಲಯದಲ್ಲಿ ಡ್ರಗ್ಸ್ ಜಾಲಕ್ಕೆ ಬ್ರೇಕ್ ಹಾಕಿದ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಅರಕ್ಷಕ ನಿರೀಕ್ಷಕರಾದ (CI) ಪ್ರಕಾಶ್, ಕ್ರೈಂ ವಿಭಾಗದ ಸಿಬ್ಬಂದಿಗಳಾದ ಎಎಸ್‌ಐ (ASI) ನಾರಾಯಣಸ್ವಾಮಿ, ಜೈ ಭೀಮ್, ಸಂಜು ವಾಲೇಕರ್ ಹಾಗೂ ಶ್ರೀಧರ್ ಕುದುರಿ ಅವರ ಸಮಯಪ್ರಜ್ಞೆ ಮತ್ತು ಭರ್ಜರಿ ಬೇಟೆಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

​ಕೈಗಾರಿಕಾ ಪ್ರದೇಶಗಳಲ್ಲಿ ಇಂತಹ ಮಾದಕ ವಸ್ತುಗಳ ಜಾಲ ಹರಡದಂತೆ ಪೊಲೀಸ್ ಇಲಾಖೆ ನಿರಂತರ ಕಣ್ಗಾವಲು ಇರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Share News