Share News

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆಯಾಗುತ್ತಿದ್ದು, ರಸ್ತೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರ ಆರೋಗ್ಯ ಕಾಪಾಡಲು ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಚಾರ ವಿಭಾಗದ ಸಿಬ್ಬಂದಿಗಳಿಗೆ ತಕ್ಷಣವೇ ನೆರಳಿನ ವ್ಯವಸ್ಥೆ, ಮಾಸ್ಕ್ ಮತ್ತು ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಡಿಜಿಪಿ ಆದೇಶ ಹೊರಡಿಸಿದ್ದಾರೆ.

​ಕೆಎಸ್‌ಪಿಸಿಎ ಮನವಿಗೆ ಸ್ಪಂದನೆ:

ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲು ಮತ್ತು ಧೂಳಿನ ಸಮಸ್ಯೆಯಿಂದ ಸಂಚಾರಿ ಪೊಲೀಸರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ (KSPCA) ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಡಿಜಿಪಿ ಅವರಿಗೆ ಪತ್ರ ಬರೆದಿದ್ದರು. ಈ ಮನವಿಗೆ ಪೂರಕವಾಗಿ ಸ್ಪಂದಿಸಿದ ಇಲಾಖೆ, ಸಿಬ್ಬಂದಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ.

ತಾತ್ಕಾಲಿಕ ನೆರಳು: ಸಂಚಾರ ನಿಯಂತ್ರಣದ ಸಿಗ್ನಲ್‌ಗಳು ಮತ್ತು ವಾಹನ ತಪಾಸಣೆ ನಡೆಸುವ ಸ್ಥಳಗಳಲ್ಲಿ ಸಿಬ್ಬಂದಿಗಳ ರಕ್ಷಣೆಗಾಗಿ ಪ್ಯಾರಾಚೂಟ್ ಕೊಡೆಗಳನ್ನು ಅಳವಡಿಸುವುದು.

​ಆರೋಗ್ಯ ಸುರಕ್ಷತೆ: ವಾಯುಮಾಲಿನ್ಯ ಮತ್ತು ಮಣ್ಣಿನ ಧೂಳಿನಿಂದ ಶ್ವಾಸಕೋಶದ ತೊಂದರೆ ತಪ್ಪಿಸಲು ಗುಣಮಟ್ಟದ ಮಾಸ್ಕ್ ವಿತರಿಸುವುದು.

​ನಿರ್ಜಲೀಕರಣ ತಡೆ: ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ (Dehydration) ತಡೆಯಲು ಶುದ್ಧ ಕುಡಿಯುವ ನೀರು ಮತ್ತು ಎಲೆಕ್ಟ್ರೋಲೈಟ್ ಪಾನೀಯಗಳ ವ್ಯವಸ್ಥೆ ಮಾಡುವುದು.

ನಗರ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗಳು ಮತ್ತು ಪೈಪ್‌ಲೈನ್ ಕಾಮಗಾರಿಗಳಿಂದಾಗಿ ಧೂಳಿನ ಪ್ರಮಾಣ ಹೆಚ್ಚಾಗಿದ್ದು, ಸಿಬ್ಬಂದಿಗಳಲ್ಲಿ ಡಸ್ಟ್ ಅಲರ್ಜಿ ಸೇರಿದಂತೆ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದನ್ನು ತಡೆಗಟ್ಟಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಪ್ರಧಾನ ಕಚೇರಿಯ ಪೊಲೀಸ್ ಉಪ ಮಹಾನಿರೀಕ್ಷಕರು ಹಾಗೂ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಆಯುಕ್ತರಾದ ಕೆ. ಪರಶುರಾಮ್ ಅವರು ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

​ಈ ಆದೇಶದಿಂದಾಗಿ ಸುಡುವ ಬಿಸಿಲಿನಲ್ಲಿ ಹಗಲಿರುಳು ಶ್ರಮಿಸುವ ಸಂಚಾರಿ ಪೊಲೀಸರಿಗೆ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಂತಾಗಿದೆ.


Share News