ದೇವನಹಳ್ಳಿ: ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ 1000 ಸಬ್ ಇನ್ಸ್‌ಪೆಕ್ಟರ್ (PSI) ಹಾಗೂ 8000 ಕಾನ್ಸ್ಟೇಬಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಘೋಷಿಸಿದರು.
ದೇವನಹಳ್ಳಿ ಟೌನ್‌ನಲ್ಲಿ ಪ್ರೆಸ್ಟೀಜ್ ಗ್ರೂಪ್ ಸಂಸ್ಥೆಯ ಸಿಎಸ್‌ಆರ್ ಅನುದಾನದಡಿ ನಿರ್ಮಿಸಲಾದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಸುಸಜ್ಜಿತ ನೂತನ ಪೊಲೀಸ್ ಠಾಣಾ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲಾಗುತ್ತಿದೆ. ಈಗಾಗಲೇ ಪಿಎಸ್‌ಐ ಹಗರಣದ ಗೊಂದಲಗಳನ್ನು ಬಗೆಹರಿಸಿ 545 ಅಭ್ಯರ್ಥಿಗಳು ತರಬೇತಿ ಮುಗಿಸಿ ಸೇವೆಗೆ ಸೇರ್ಪಡೆಗೊಂಡಿದ್ದಾರೆ. ಹೊಸ ನೇಮಕಾತಿಗೆ ಮುಖ್ಯಮಂತ್ರಿಗಳು ಮತ್ತು ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು. ಸಬ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಅವಧಿಯನ್ನು ಕನಿಷ್ಠ ಎರಡು ವರ್ಷಗಳಿಗೆ ಕಡ್ಡಾಯಗೊಳಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭೂಮಿಯ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ದಂಧೆ ಹೆಚ್ಚಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, “ಯಾವುದೇ ಪೊಲೀಸ್ ಅಧಿಕಾರಿ ಠಾಣೆಯಲ್ಲಿ ಕುಳಿತು ರಿಯಲ್ ಎಸ್ಟೇಟ್ ದಂಧೆ ಮಾಡಬಾರದು. ಸಂತ್ರಸ್ತರು ಬಂದಾಗ ಎಫ್‌ಐಆರ್ ದಾಖಲಿಸಿ ನ್ಯಾಯ ಒದಗಿಸುವುದು ನಿಮ್ಮ ಆದ್ಯತೆಯಾಗಲಿ. ಹಣ ವಸೂಲಿಗೆ ಇಳಿದರೆ ಕಠಿಣ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಸಿದರು.
ಆವತಿ ಬಳಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಭಾರತ ಮೀಸಲು ಪಡೆಯ (IRB) ಘಟಕಕ್ಕೆ ಭೂಮಿಪೂಜೆ ನೆರವೇರಿಸಿದ ಸಚಿವರು, “ಇದು 568 ಕೋಟಿ ರೂ.ಗಳ ಬೃಹತ್ ಯೋಜನೆಯಾಗಿದ್ದು, 1000 ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ತರಬೇತಿ ಪಡೆಯಲಿದ್ದಾರೆ. ಪ್ರಸ್ತುತ 30 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, “ಪೊಲೀಸ್ ಠಾಣೆಗಳು ಸದಾ ಜನಸ್ನೇಹಿಯಾಗಿರಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿ, ಅನಿವಾರ್ಯವಿದ್ದಲ್ಲಿ ಮಾತ್ರ ಎಫ್‌ಐಆರ್ ದಾಖಲಿಸಿ. ಇದರಿಂದ ಹಳ್ಳಿಗಳಲ್ಲಿ ಮನಸ್ತಾಪಗಳು ಕಡಿಮೆಯಾಗುತ್ತವೆ” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸದ ಡಾ. ಕೆ. ಸುಧಾಕರ್, ಡಿಜಿಪಿ ಡಾ. ಎಂ.ಎ. ಸಲೀಂ, ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.