ಮೈಸೂರು : ಅಂತರರಾಜ್ಯ ತೆರಿಗೆ ಪಾವತಿಸದೆ ನಿಯಮ ಉಲ್ಲಂಘಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಇಲಾಖೆ (RTO) ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ತೆರಿಗೆ ವಂಚಕರಿಗೆ ಚಾಟಿ ಬೀಸಿದ್ದಾರೆ.
ಮೈಸೂರು ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಶೋಭಾ ಎಂ. ಅವರ ನಿರ್ದೇಶನದಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ದೀಪಕ್ ಎಲ್. ಅವರ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ವೇಳೆ ಸೂಕ್ತ ಅಂತರರಾಜ್ಯ ತೆರಿಗೆ ಪಾವತಿಸದೆ ಅಕ್ರಮವಾಗಿ ಸಂಚರಿಸುತ್ತಿದ್ದ 3 ಪ್ರಮುಖ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳ ತಂಡ:
ಈ ದಾಳಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಚಂದ್ರ ಸಿ.ಎನ್., ಮೋಟಾರು ವಾಹನ ನಿರೀಕ್ಷಕರಾದ ಅನಂತರಾಮು ಮತ್ತು ಹರ್ಷಾ ಎನ್., ಅಧೀಕ್ಷಕರಾದ ಮಂಜುನಾಥ್ ಬಿ.ಎಸ್. ಹಾಗೂ ಮನೋಹರ್ ಮತ್ತು ಪ್ರಥಮ ದರ್ಜೆ ಸಹಾಯಕ ರವಿ ಎಂ.ಆರ್. ಭಾಗವಹಿಸಿದ್ದರು.
ಸರ್ಕಾರಕ್ಕೆ ಬರಬೇಕಾದ ತೆರಿಗೆ ಹಣವನ್ನು ವಂಚಿಸಿ ಸಾರ್ವಜನಿಕ ಹಣದ ದುರ್ಬಳಕೆಗೆ ಆಸ್ಪದ ನೀಡುತ್ತಿರುವ ವಾಹನ ಸವಾರರ ವಿರುದ್ಧ ಸಾರಿಗೆ ಇಲಾಖೆ ಕೈಗೊಂಡಿರುವ ಈ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Arakshakara Times Media
Related posts
