ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೊಲ್ಲಿ ರಾಷ್ಟ್ರಗಳ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲದ ಅಭಾವ ಸೃಷ್ಟಿಸಿ, ಗ್ಯಾಸ್ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಏಜೆನ್ಸಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ನಡೆದ ಗ್ಯಾಸ್ ಏಜೆನ್ಸಿ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕೆಳಗಿನ ಪ್ರಮುಖ ಸೂಚನೆಗಳನ್ನು ನೀಡಿದರು:
ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಕಾಯ್ದೆಯಡಿ ನಿಗದಿತ ದರಕ್ಕೇ ಸಿಲಿಂಡರ್ ಮಾರಾಟ ಮಾಡಬೇಕು. ನಿಗದಿತ ಬೆಲೆಗಿಂತ ಹೆಚ್ಚು ವಸೂಲಿ ಮಾಡುವುದು ಅಥವಾ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಏಜೆನ್ಸಿಗಳ ಪರವಾನಗಿಯನ್ನು ತಕ್ಷಣವೇ ರದ್ದುಪಡಿಸಲಾಗುವುದು ಎಂದು ತಿಳಿಸಿದರು.
ಗೊಂದಲ ಬೇಡ: ಜಿಲ್ಲೆಯಲ್ಲಿ ಐ.ಓ.ಸಿ.ಎಲ್, ಎಚ್.ಪಿ.ಸಿ.ಎಲ್ ಮತ್ತು ಬಿಪಿಸಿಎಲ್ ಕಂಪನಿಗಳ ಅಡಿಯಲ್ಲಿ 24 ಏಜೆನ್ಸಿಗಳಿದ್ದು, ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ.
ಬುಕಿಂಗ್ ನಿಯಮ: ಗೃಹ ಉಪಯೋಗಿ ಸಿಲಿಂಡರ್ ಬುಕ್ ಮಾಡಲು 25 ದಿನಗಳ ಅಂತರವಿರಬೇಕು. ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಟ್ಟು ಆತಂಕಕ್ಕೊಳಗಾಗಬಾರದು.
ದುರ್ಬಳಕೆ ನಿಷೇಧ: ಗೃಹ ಬಳಕೆಯ ಸಿಲಿಂಡರ್ಗಳನ್ನು ಹೋಟೆಲ್, ರೆಸ್ಟೋರೆಂಟ್ ಅಥವಾ ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ.
ಪ್ರಸ್ತುತ ಪರೀಕ್ಷಾ ಕಾಲ ಆರಂಭವಾಗುತ್ತಿರುವುದರಿಂದ ಸರ್ಕಾರಿ ಮತ್ತು ಖಾಸಗಿ ವಸತಿ ನಿಲಯಗಳಿಗೆ ಅಡುಗೆ ಅನಿಲದ ಕೊರತೆಯಾಗದಂತೆ ನಿರಂತರ ಸರಬರಾಜು ಮಾಡಲು ವಿತರಕರಿಗೆ ಸೂಚಿಸಿದರು. ವಿದ್ಯಾರ್ಥಿಗಳ ಊಟಕ್ಕೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಇದೇ ವೇಳೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾತನಾಡಿದ ಡಿಸಿ, ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ನೀರಿನ ಅಭಾವ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಬತ್ತಿದ ಬೋರ್ವೆಲ್ಗಳ ಮರು ಭರ್ತಿ ಹಾಗೂ ಅಗತ್ಯವಿದ್ದಲ್ಲಿ ಹೊಸ ಬೋರ್ವೆಲ್ ಕೊರೆಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಉಪವಿಭಾಗಾಧಿಕಾರಿ ದುರ್ಗಾ ಶ್ರೀ, ಯೋಜನಾಧಿಕಾರಿ ರಾಮಕೃಷ್ಣ, ಆಹಾರ ಇಲಾಖೆ ಉಪನಿರ್ದೇಶಕ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ ಹಾಗೂ ವಿವಿಧ ಗ್ಯಾಸ್ ಏಜೆನ್ಸಿಗಳ ಮುಖ್ಯಸ್ಥರು ಭಾಗವಹಿಸಿದ್ದರು.