ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯೂವೆಲ್ಲರಿ ಪಾಲಿಶಿಂಗ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ ಕೇವಲ ಒಂದು ತಿಂಗಳಲ್ಲೇ ಮಾಲೀಕನಿಗೆ ವಂಚಿಸಿ ಸುಮಾರು 12 ಕೆಜಿ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 10 ಕೆಜಿ 120 ಗ್ರಾಂ ತೂಕದ ಬೆಳ್ಳಿಯ ಆಭರಣ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಅಂದಾಜು 35 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ನಗರದ ಸಿ.ಟಿ ಸ್ಟ್ರೀಟ್ ಕ್ರಾಸ್‌ನ ಬೆಟ್ಟಪ್ಪ ಲೇನ್‌ನಲ್ಲಿ ಜ್ಯೂವೆಲ್ಲರಿ ಪಾಲಿಶಿಂಗ್ ಅಂಗಡಿ ಹೊಂದಿರುವ ಮಾಲೀಕರು, ತಮ್ಮಲ್ಲಿ ಕೆಲಸಕ್ಕೆ ಸೇರಿದ್ದ ವ್ಯಕ್ತಿಯೊಬ್ಬ ಜನವರಿ 29ರಂದು ಅಂಗಡಿಯಲ್ಲಿದ್ದ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಬಗ್ಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹಲಸೂರುಗೇಟ್ ಪೊಲೀಸರು ತನಿಖೆ ಆರಂಭಿಸಿದ್ದರು. ತಾಂತ್ರಿಕ ವಿಶ್ಲೇಷಣೆ ಹಾಗೂ ಬಾತ್ಮೀದಾರರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ರಾಜಸ್ಥಾನದ ಸೆಡ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಹಾಗೂ ಆತನ ಸ್ನೇಹಿತನನ್ನು ಫೆಬ್ರವರಿ 28ರಂದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಟ್ರಾನ್ಸಿಸ್ಟ್ ವಾರೆಂಟ್ ಮೂಲಕ ಬೆಂಗಳೂರಿಗೆ ಕರೆತಂದು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ವಿಚಾರಣೆಯ ವೇಳೆ ಆರೋಪಿಗಳು ಕಬ್ಬನ್‌ಪೇಟೆಯ ಮತ್ತೊಂದು ಪಾಲಿಶಿಂಗ್ ಅಂಗಡಿಯಲ್ಲಿ ಸುಮಾರು 1.36 ಕೆಜಿ ಬೆಳ್ಳಿಯನ್ನು ನೀಡಿರುವುದಾಗಿ ಬಾಯಿಬಿಟ್ಟಿದ್ದಾರೆ. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆ ಅಂಗಡಿಯ ಮೇಲೆಯೂ ದಾಳಿ ನಡೆಸಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಗರದ ಕೇಂದ್ರ ವಿಭಾಗದ ಡಿಸಿಪಿ ಶ್ರೀ. ಅಕ್ಷಯ್ ಎಂ ಹಾಕೆ ಅವರ ಮಾರ್ಗದರ್ಶನದಲ್ಲಿ, ಎಸಿಪಿ ಶ್ರೀ. ಸುಧೀರ್ ಎಸ್ ನೇತೃತ್ವದ ಇನ್ಸ್‌ಪೆಕ್ಟರ್ ಶ್ರೀ. ಅಶ್ವತ್ಥನಾರಾಯಣಸ್ವಾಮಿ ಬಿ ಎನ್ ಹಾಗೂ ಸಿಬ್ಬಂದಿಗಳ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್