ಕಾರವಾರ: ಕಳೆದ ಒಂದು ವಾರದಿಂದ ಜನವಸತಿ ಪ್ರದೇಶದಲ್ಲಿ ಬೀಡುಬಿಟ್ಟು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬಿದ್ದಿದೆ. ಕಾರವಾರ ತಾಲೂಕಿನ ಚಿತ್ತಾಕುಲ ಪಂಚಾಯತ್ ವ್ಯಾಪ್ತಿಯ ಸಾವರಪೈ ಮಜಿರೆಯಲ್ಲಿ ಶುಕ್ರವಾರ ಈ ಕಾರ್ಯಾಚರಣೆ ಯಶಸ್ವಿಯಾಗಿದೆ.
ಕಳೆದ ಕೆಲವು ದಿನಗಳಿಂದ ಚಿತ್ತಾಕುಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯ ಸಂಚಾರ ವಿಪರೀತವಾಗಿತ್ತು. ಹಗಲು ಹೊತ್ತಿನಲ್ಲೇ ಜನವಸತಿ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದರಿಂದ ಸಾರ್ವಜನಿಕರು ಮನೆಯಿಂದ ಹೊರಬರಲು ಭಯಪಡುವಂತಾಗಿತ್ತು. ಚಿರತೆಯ ಭೀತಿಯಿಂದಾಗಿ ಗ್ರಾಮಸ್ಥರು ಸಂಜೆ ವೇಳೆ ಓಡಾಟ ನಿಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಗ್ರಾಮಸ್ಥರ ದೂರಿಗೆ ತಕ್ಷಣ ಸ್ಪಂದಿಸಿದ ವಲಯ ಅರಣ್ಯಾಧಿಕಾರಿ (RFO) ವಿ.ಪಿ. ನಾಯ್ಕ ಅವರ ನೇತೃತ್ವದ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಚಿರತೆ ಸಂಚರಿಸುವ ಸಂಭಾವ್ಯ ಪಥವನ್ನು ಗುರುತಿಸಿದ ಅರಣ್ಯ ಸಿಬ್ಬಂದಿ, ಆಯಕಟ್ಟಿನ ಜಾಗದಲ್ಲಿ ಬೋನು ಅಳವಡಿಸಿ ಆಹಾರವನ್ನಿಟ್ಟು ಕಾದು ಕುಳಿತಿದ್ದರು.
ಶುಕ್ರವಾರ ಮುಂಜಾನೆ ಆಹಾರ ಹುಡುಕಿಕೊಂಡು ಬಂದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನೊಳಗೆ ಸಿಲುಕಿಕೊಂಡಿದೆ. ಚಿರತೆ ಸೆರೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ತಂಡೋಪತಂಡವಾಗಿ ಆಗಮಿಸಿ ವೀಕ್ಷಿಸಿದರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು, ಮನುಷ್ಯರ ಸಂಚಾರವಿಲ್ಲದ ದಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಪ್ರಾಣಭಯದಲ್ಲಿಯೇ ದಿನದೂಡುತ್ತಿದ್ದ ಸಾವರಪೈ ಮಜಿರೆ ಗ್ರಾಮದ ಜನತೆ, ಚಿರತೆ ಸೆರೆಯಾದ ನಂತರ ನಿಟ್ಟುಸಿರು ಬಿಟ್ಟಿದ್ದಾರೆ. ಸಮಯೋಚಿತವಾಗಿ ಕಾರ್ಯಪ್ರವೃತ್ತರಾಗಿ ಚಿರತೆಯನ್ನು ಹಿಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.