ಹೆಚ್.ಡಿ.ಕೋಟೆ: ಸೌದೆ ತರಲು ಅರಣ್ಯದ ಅಂಚಿಗೆ ಹೋದ ಮಹಿಳೆಯೊಬ್ಬರ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ ಪರಿಣಾಮ, ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮಾರನಹಾಡಿಯಲ್ಲಿ ನಡೆದಿದೆ.
ಮಾರನಹಾಡಿಯ ನಿವಾಸಿ ಜ್ಯೋತಿ (25) ಆನೆ ದಾಳಿಯಿಂದ ಗಾಯಗೊಂಡ ದುರ್ದೈವಿ. ಹಾಡಿಯಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಆಡುಕುಪ್ಪೆ ಕೆರೆಯ ಬಳಿ ಜ್ಯೋತಿ ಸೇರಿದಂತೆ ಸುಮಾರು 15 ಮಹಿಳೆಯರ ತಂಡವು ಸೌದೆ ತರಲು ಹೋಗಿತ್ತು. ಈ ಸಂದರ್ಭದಲ್ಲಿ ಪೊದೆಗಳ ನಡುವಿನಿಂದ ಬಂದ ಕಾಡಾನೆ ದಿಢೀರನೆ ಗುಂಪಿನ ಮೇಲೆ ದಾಳಿ ಮಾಡಿದೆ.
ಆನೆಯನ್ನು ಕಂಡ ತಕ್ಷಣ ಜೊತೆಯಲ್ಲಿದ್ದ ಇತರ ಮಹಿಳೆಯರು ಅಲ್ಲಿಂದ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಜ್ಯೋತಿ ಅವರಿಗೆ ಸಮಯಕ್ಕೆ ಸರಿಯಾಗಿ ಓಡಿ ಹೋಗಲು ಸಾಧ್ಯವಾಗದೆ ಆನೆಯ ಅಟ್ಟಹಾಸಕ್ಕೆ ಸಿಲುಕಿದ್ದಾರೆ. ಕಾಡಾನೆಯು ಜ್ಯೋತಿ ಅವರನ್ನು ಕಾಲಿನಿಂದ ತುಳಿದು, ತನ್ನ ದಂತದಿಂದ ಹೊಟ್ಟೆಯ ಪಕ್ಕೆಲುಬಿಗೆ ತಿವಿದು ಗಂಭೀರವಾಗಿ ಗಾಯಗೊಳಿಸಿದೆ ಎಂದು ತಿಳಿದುಬಂದಿದೆ.
ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿದ ಹಾಡಿಯ ನಿವಾಸಿಗಳು, ಆನೆಯನ್ನು ಓಡಿಸಿ ಜ್ಯೋತಿ ಅವರನ್ನು ರಕ್ಷಿಸಿದ್ದಾರೆ. ತಕ್ಷಣ ಅವರನ್ನು ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಅರಣ್ಯದ ಅಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.