ಮೈಸೂರು: ವಾಯುವಿಹಾರಿಗಳ ಪಾಲಿನ ಸ್ವರ್ಗ, ಮೈಸೂರಿನ ಪಾರಂಪರಿಕ ಕುಕ್ಕರಹಳ್ಳಿ ಕೆರೆಯ ಅಭಿವೃದ್ಧಿ ಮತ್ತು ಸಂರಕ್ಷಣೆಯ ಯೋಜನೆಗಳು ಕೇವಲ ಕಡತಗಳಿಗೆ ಸೀಮಿತವಾಗಿವೆಯೇ ಎಂಬ ಅನುಮಾನ ಮೂಡುತ್ತಿದೆ. ಕೆರೆಯ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಲು ದೆಹಲಿ ಮೂಲದ ಸಂಸ್ಥೆಗೆ ನೀಡಲಾದ ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಈಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಕುಕ್ಕರಹಳ್ಳಿ ಕೆರೆಯ ಸಂರಕ್ಷಣೆಗಾಗಿ 2023 ರಲ್ಲಿ ಅಂದಿನ ಮುಡಾ (ಪ್ರಸ್ತುತ ಎಂಡಿಎ) ದೆಹಲಿಯ ‘ಇಂಟ್ಯಾಕ್’ (Intact) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು 60.80 ಲಕ್ಷ ರೂಪಾಯಿ ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಲು ಒಪ್ಪಂದವಾಗಿದ್ದು, ಸಂಸ್ಥೆಗೆ ಶೇ. 25ರಷ್ಟು ಅಂದರೆ 18.50 ಲಕ್ಷ ರೂಪಾಯಿ ಮುಂಗಡವಾಗಿ ಪಾವತಿಸಲಾಗಿತ್ತು. ಒಪ್ಪಂದದ ಪ್ರಕಾರ 9 ತಿಂಗಳಲ್ಲಿ ವರದಿ ನೀಡಬೇಕಿದ್ದ ಸಂಸ್ಥೆ, 3 ವರ್ಷ ಕಳೆದರೂ ಇದುವರೆಗೆ ಯಾವುದೇ ವರದಿ ಸಲ್ಲಿಸದೆ ಜಾಣ ಮೌನಕ್ಕೆ ಶರಣಾಗಿದೆ.
ವರದಿ ನೀಡುವಂತೆ ಎಂಡಿಎ ವತಿಯಿಂದ ‘ಇಂಟ್ಯಾಕ್’ ಸಂಸ್ಥೆಯ ಮುಖ್ಯಸ್ಥರಿಗೆ ನಿರಂತರವಾಗಿ ಪತ್ರಗಳನ್ನು ಬರೆಯಲಾಗುತ್ತಿದೆ. ಆದರೆ, ಸಂಸ್ಥೆಯು ಯಾವುದೇ ಪತ್ರಕ್ಕೂ ಪ್ರತಿಕ್ರಿಯೆ ನೀಡದೆ ‘ಡೋಂಟ್ ಕೇರ್’ ಎನ್ನುತ್ತಿದೆ. ಇಷ್ಟಾದರೂ ಹಣ ಪಡೆದು ವಂಚಿಸುತ್ತಿರುವ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲು ಎಂಡಿಎ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಡಿಪಿಆರ್ ತಯಾರಿಕೆಗಾಗಿಯೇ 60 ಲಕ್ಷಕ್ಕೂ ಅಧಿಕ ಹಣ ವ್ಯಯಿಸುತ್ತಿರುವ ಎಂಡಿಎ, ಈ ಕುರಿತು ತನ್ನ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡದಿರುವುದು ವಿಪರ್ಯಾಸ. 18.50 ಲಕ್ಷ ರೂಪಾಯಿ ಮುಂಗಡ ಹಣ ಪಡೆದ ಸಂಸ್ಥೆ ಪ್ರಗತಿ ಶೂನ್ಯವಾಗಿದ್ದರೂ, ಅಧಿಕಾರಿಗಳು ಏಕೆ ಮೌನವಾಗಿದ್ದಾರೆ? ಈ ‘ಮೌನದ’ ಹಿಂದಿನ ಮಸಲತ್ತು ಏನು ಎಂಬ ಪ್ರಶ್ನೆ ವಾಯುವಿಹಾರಿಗಳನ್ನು ಕಾಡುತ್ತಿದೆ.
ಇತ್ತೀಚೆಗೆ ಬಫರ್ ಜೋನ್ ಗುರುತಿಸುವಂತೆ ಮೈಸೂರು ವಿಶ್ವವಿದ್ಯಾನಿಲಯವು ಎಂಡಿಎಗೆ ಪತ್ರ ಬರೆದಿದ್ದು, ಕೆರೆ ಸಂರಕ್ಷಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಕೇವಲ ಪತ್ರ ವ್ಯವಹಾರಗಳಿಗೆ ಸೀಮಿತವಾಗದೆ, ಮೈಸೂರು ವಿವಿ ಮತ್ತು ಎಂಡಿಎ ಜಂಟಿಯಾಗಿ ಕಾರ್ಯರೂಪಕ್ಕೆ ಇಳಿಯಬೇಕಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಅನಗತ್ಯವಾಗಿ ಖರ್ಚು ಮಾಡಿ, ವರದಿಗಳ ಹೆಸರಲ್ಲಿ ಕಾಲಹರಣ ಮಾಡುವುದನ್ನು ಬಿಟ್ಟು, ಕೆರೆಯ ಅಸ್ತಿತ್ವ ಉಳಿಸುವ ಪ್ರಾಮಾಣಿಕ ಕೆಲಸವಾಗಬೇಕಿದೆ.
ಇನ್ನಾದರೂ ಎಂಡಿಎ ಎಚ್ಚೆತ್ತುಕೊಂಡು ಇಂಟ್ಯಾಕ್ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಜರುಗಿಸಿ, ಕುಕ್ಕರಹಳ್ಳಿ ಕೆರೆಗೆ ನ್ಯಾಯ ಒದಗಿಸುತ್ತದೆಯೇ ಎಂದು ಕಾದು ನೋಡಬೇಕಿದೆ.
