ವರದಕ್ಷಿಣೆಯೆಂಬ ರಾಕ್ಷಸನ ದಾಹಕ್ಕೆ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಲಿ ಸಂದಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು 26 ವರ್ಷದ ವಂದನಾ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೇವಲ ಮೂರು ತಿಂಗಳ ಹಸುಗೂಸು ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ.
ಬೆಟ್ಟದಾಸನಪುರ ಮೂಲದ ವಂದನಾ ಅವರಿಗೆ ಮೂರು ವರ್ಷಗಳ ಹಿಂದೆ ವಿಕ್ರಂ ಶೇಷ ಎಂಬುವವರ ಜೊತೆ ವಿವಾಹವಾಗಿತ್ತು. ಮದುವೆಯ ಆರಂಭದ ದಿನಗಳಿಂದಲೂ ವರದಕ್ಷಿಣೆಗಾಗಿ ಪತಿ ಹಾಗೂ ಆತನ ಕುಟುಂಬಸ್ಥರು ವಂದನಾ ಅವರಿಗೆ ಮಾನಸಿಕ ಮತ್ತು ದೈಹಿಕವಾಗಿ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಕಳೆದ ಗುರುವಾರ ಸಂಜೆ ವಂದನಾ ಅವರು ಮನೆಯಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ.
ವಂದನಾ ಅವರ ಸಾವಿನ ಬಗ್ಗೆ ಮೃತಳ ಸಂಬಂಧಿಕರು ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ವಂದನಾ ಅವರ ಸೀರೆ ಫ್ಯಾನ್ನ ರೆಕ್ಕೆಗಳಿಗೆ ಸಿಲುಕಿಕೊಂಡಿದ್ದ ರೀತಿ ನೋಡಿದರೆ, ಇದೊಂದು ಆತ್ಮಹತ್ಯೆಯಲ್ಲ, ಬದಲಾಗಿ ವ್ಯವಸ್ಥಿತವಾಗಿ ನಡೆದ ಕೊಲೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ವರದಕ್ಷಿಣೆ ಕಿರುಕುಳದ ಕುರಿತು ಪೊಲೀಸ್ ಮೆಟ್ಟಿಲೇರಿದಾಗ, ಪೊಲೀಸರು ಕೇವಲ ರಾಜಿ-ಸಂಧಾನ ಮಾಡಿ ಕಳುಹಿಸಿದ್ದರೇ ಹೊರತು ಆರೋಪಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡಿರಲಿಲ್ಲ. ಪೊಲೀಸರ ಈ ನಿರ್ಲಕ್ಷ್ಯವೇ ಇಂದು ವಂದನಾ ಅವರ ಜೀವ ಕಳೆದುಕೊಳ್ಳಲು ಕಾರಣವಾಗಿದೆ ಎಂದು ಮೃತರ ಸಂಬಂಧಿಕರು ದೂರಿದ್ದಾರೆ.
ಮೂರು ತಿಂಗಳ ಕಂದಮ್ಮನನ್ನು ಅಗಲಿರುವ ವಂದನಾ ಅವರ ಸಾವು ಇಡೀ ಪರಿಸರದಲ್ಲಿ ಶೋಕದ ಛಾಯೆ ಮೂಡಿಸಿದೆ. ಸದ್ಯ ಹುಳಿಮಾವು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ನಿಷ್ಪಕ್ಷಪಾತ ತನಿಖೆಯ ಮೂಲಕ ಮೃತಳಿಗೆ ನ್ಯಾಯ ಸಿಗಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.