ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ ಬಿ ಐ ಲೇಔಟ್ನ ಅಪಾರ್ಟ್ಮೆಂಟ್ ಒಂದರಲ್ಲಿ 65 ರಿಂದ 70 ವರ್ಷದ ವೃದ್ಧರೊಬ್ಬರು ಒಂಟಿಯಾಗಿ ವಾಸಿಸುತ್ತಿದ್ದರು. ಕೆಲ ದಿನಗಳಿಂದ ಕುಟುಂಬಸ್ಥರು ಅವರಿಗೆ ಸತತವಾಗಿ ಫೋನ್ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು ತಕ್ಷಣವೇ ಹೊಯ್ಸಳ-153 ರ ಕರ್ತವ್ಯ ನಿರತ ಅಧಿಕಾರಿಗಳಾದ ಶ್ರೀ. ಮಂಜುನಾಥ ಮತ್ತು ಶ್ರೀ. ಶಿವಲಿಂಗಯ್ಯ ಅವರಿಗೆ ಮಾಹಿತಿ ನೀಡಿ, ಸ್ಥಳಕ್ಕೆ ಹೋಗಿ ಪರಿಶೀಲಿಸುವಂತೆ ವಿನಂತಿಸಿದರು.
ಮಾಹಿತಿ ಸಿಕ್ಕ ತಕ್ಷಣವೇ ಕಾರ್ಯಪ್ರವೃತ್ತರಾದ ಹೊಯ್ಸಳ ಅಧಿಕಾರಿಗಳು, ಪಿಎಸ್ಐ ಮತ್ತು ಮತ್ತೋರ್ವ ಸಿಬ್ಬಂದಿಯೊಂದಿಗೆ ವೃದ್ಧರ ಮನೆಗೆ ಧಾವಿಸಿದರು. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮನೆಯ ಬಾಗಿಲನ್ನು ಮುರಿದು ಒಳಪ್ರವೇಶಿಸಿದ ತಂಡಕ್ಕೆ, ವೃದ್ಧರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿತು.
ಸಮಯ ವ್ಯರ್ಥ ಮಾಡದೆ ತಕ್ಷಣವೇ ಸ್ಥಳಕ್ಕೆ ಆಂಬುಲೆನ್ಸ್ ಕರೆಸಿಕೊಂಡ ಪೊಲೀಸರು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ತದನಂತರ ಅವರ ಕುಟುಂಬಸ್ಥರನ್ನು ಆಸ್ಪತ್ರೆಗೆ ಬರಮಾಡಿಕೊಂಡು, ವೃದ್ಧರನ್ನು ಜಾಗರೂಕತೆಯಿಂದ ನೋಡಿಕೊಳ್ಳುವಂತೆ ತಿಳಿಹೇಳಿ ಹಸ್ತಾಂತರಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಇಲಾಖೆಯ ಈ ತ್ವರಿತ ಹಾಗೂ ಸಹಾನುಭೂತಿಯ ಕ್ರಮವು ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್