ಮೈಸೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸ್ವಂತ ತಂಗಿಯ ಮಗನನ್ನು (ಅಳಿಯ) ಕಾಂಟ್ರಾಕ್ಟ್ ಕಿಲ್ಲಿಂಗ್ (ಸುಪಾರಿ) ನೀಡಿ ಕೊಲೆ ಮಾಡಲು ಯತ್ನಿಸಿದ ಭೀಕರ ಜಾಲವನ್ನು ಭೇದಿಸುವಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಒಮ್ಮೆ ಅಪಘಾತ ನಡೆಸಿ ಹಾಗೂ ಮತ್ತೊಮ್ಮೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ನೀಡಿದ್ದ ಸೋದರಮಾವ ಹಾಗೂ ಮೈಸೂರು-ಹುಣಸೂರಿನ ಕುಖ್ಯಾತ ರೌಡಿಶೀಟರ್‌ಗಳು ಸೇರಿ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪಿರ್ಯಾದುದಾರರಾದ ಪ್ರವೀಣ್ ಕುಮಾರ್ ಎಂಬುವವರನ್ನು ಕೊಲೆ ಮಾಡಲು ಎರಡು ಬಾರಿ ಸ್ಕೆಚ್ ಹಾಕಲಾಗಿತ್ತು.
ಮೊದಲ ಯತ್ನ (ಅಪಘಾತ): ಕಳೆದ 2025ರ ಏಪ್ರಿಲ್ 21 ರಂದು ಪಿರಿಯಾಪಟ್ಟಣ ವ್ಯಾಪ್ತಿಯ ಹಿಟ್ನಹಳ್ಳಿ ಗ್ರಾಮದ ಕೆರೆಯ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಪ್ರವೀಣ್ ಕುಮಾರ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರೊಂದು ಜೋರಾಗಿ ಡಿಕ್ಕಿ ಹೊಡೆದಿತ್ತು. ಇದನ್ನು ಕೇವಲ ಅಪಘಾತ ಎಂದು ಪ್ರಕರಣ ದಾಖಲಿಸಲಾಗಿತ್ತು.
ಎರಡನೇ ಯತ್ನ (ಲಾಂಗ್ ದಾಳಿ): ಇದಾದ ಬಳಿಕ ಇತ್ತೀಚೆಗೆ ಅಂದರೆ 2026ರ ಏಪ್ರಿಲ್ 13 ರಂದು ಸಂಜೆ ಪಿರಿಯಾಪಟ್ಟಣ ಠಾಣಾ ವ್ಯಾಪ್ತಿಯಲ್ಲೇ ಪಲ್ಸರ್ 220 ಬೈಕಿನಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಬಂದ ಇಬ್ಬರು ಮುಸುಕುಧಾರಿಗಳು ಪ್ರವೀಣ್ ಕುಮಾರ್ ಅವರ ಮೇಲೆ ಏಕಾಏಕಿ ಲಾಂಗ್ ಹಾಗೂ ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ನಡೆಸಿದ್ದರು. ಈ ವೇಳೆ ಪ್ರವೀಣ್ ಅವರ ಕೈಗೆ ತೀವ್ರತರವಾದ ಗಾಯಗಳಾಗಿದ್ದವು.
ಈ ಎರಡೂ ಘಟನೆಗಳ ಹಿಂದೆ ತನ್ನ ಸೋದರಮಾವ ಸೌದೆ ರಾಜು ಎಂಬಾತನ ಕೈವಾಡವಿರುವ ಬಗ್ಗೆ ಪ್ರವೀಣ್ ಕುಮಾರ್ ಪೊಲೀಸರಿಗೆ ದೂರು ನೀಡಿ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು.
ಹುಣಸೂರು ಉಪವಿಭಾಗದ ಡಿಎಸ್‌ಪಿ ರವಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಮೊದಲು ಮುಖ್ಯ ಆರೋಪಿ ಬೆಟ್ಟದಪುರದ ಸೌದೆ ರಾಜು ಎಂಬಾತನನ್ನು ವಶಕ್ಕೆ ಪಡೆದು ಕೂಲಂಕುಷ ವಿಚಾರಣೆ ನಡೆಸಿದಾಗ ಇಡೀ ಸುಪಾರಿ ಜಾಲದ ರಹಸ್ಯ ಬಯಲಾಗಿದೆ. ಆಸ್ತಿ ವಿಚಾರಕ್ಕಾಗಿ ಅಳಿಯ ಪ್ರವೀಣ್ ಕುಮಾರ್‌ನನ್ನು ಮುಗಿಸಲು ಸೌದೆ ರಾಜು ಮಾಸ್ಟರ್ ಪ್ಲಾನ್ ಮಾಡಿದ್ದ.
ಮೊದಲ ಸುಪಾರಿ (ಅಪಘಾತಕ್ಕೆ ₹7 ಲಕ್ಷ): ಸೌದೆ ರಾಜು ತನಗೆ ಪರಿಚಯವಿದ್ದ ಸುಳ್ಯ ಮೂಲದ ಶಫಿ ಎಂಬಾತನಿಗೆ ಪ್ರವೀಣ್‌ನನ್ನು ಕಾರು ಡಿಕ್ಕಿ ಹೊಡೆಸಿ ಕೊಲ್ಲಲು 7 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದ. ಅದರಂತೆ ಶಫಿ ಕಾರಿನಿಂದ ಡಿಕ್ಕಿ ಹೊಡೆಸಿದ್ದರೂ ಪ್ರವೀಣ್ ಪ್ರಾಣಾಪಾಯದಿಂದ ಪಾರಾಗಿದ್ದ. ಈ ಅಪಘಾತದ ಕೃತ್ಯಕ್ಕೆ ಬಳಸಿದ್ದ ಕಸೈಲೋ ಕಾರು ಹಾಗೂ 4 ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮೊದಲ ಯತ್ನ ವಿಫಲವಾದಾಗ ಸೌದೆ ರಾಜು, ಪಿರಿಯಾಪಟ್ಟಣದ ಮೀರ್ ಹುಸೇನ್ ಅಲಿ ಅಲಿಯಾಸ್ ಸುಲ್ತಾನ್ ಎಂಬಾತನಿಗೆ ಭರ್ಜರಿ 30 ಲಕ್ಷ ರೂಪಾಯಿಗೆ ಮತ್ತೊಮ್ಮೆ ಸುಪಾರಿ ನೀಡಿದ್ದ. ಸುಲ್ತಾನ್ ಈ ಕೆಲಸಕ್ಕಾಗಿ ಹುಣಸೂರು ಪಟ್ಟಣ ಠಾಣೆಯ ರೌಡಿಶೀಟರ್ ನಯಾಜ್ ಅಹಮದ್‌ನನ್ನು ಸಂಪರ್ಕಿಸಿದ್ದ. ನಯಾಜ್ ಅಹಮದ್ ಮತ್ತು ಸುಲ್ತಾನ್ ಇಬ್ಬರು ಸೇರಿ ಮೈಸೂರಿನ ಕುಖ್ಯಾತ ರೌಡಿಗಳಾದ ಹಬೀದ್ ಪಾಷಾ (6 ಕೊಲೆ ಕೇಸ್ ಸೇರಿದಂತೆ 12 ಪ್ರಕರಣಗಳ ಆರೋಪಿ), ಆಯಾಜ್ ಪಾಷಾ ಅಲಿಯಾಸ್ ಹೀರೋ ಮತ್ತು ಹಮೀನುಲ್ಲಾ ಎಂಬುವವರಿಗೆ ಈ ಕಾಂಟ್ರಾಕ್ಟ್ ವಹಿಸಿದ್ದರು. ಅದರಂತೆ ಆಯಾಜ್ ಪಾಷಾ ಮತ್ತು ಹಬೀದ್ ಪಾಷಾ ಕಳೆದ ಏಪ್ರಿಲ್ 13 ರಂದು ಬೈಕಿನಲ್ಲಿ ಬಂದು ಪ್ರವೀಣ್ ಮೇಲೆ ಲಾಂಗ್‌ನಿಂದ ದಾಳಿ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ.
ಅಪಘಾತ ಪ್ರಕರಣದಲ್ಲಿ ಬಂಧಿತರು:
ರಾಜು ಅಲಿಯಾಸ್ ಸೌದೆ ರಾಜು (57 ವರ್ಷ, ಮರದ ವ್ಯಾಪಾರ, ಬೆಟ್ಟದಪುರ ಗ್ರಾಮ) – ಮುಖ್ಯ ಸಂಚುಗಾರ.
ಶಫಿ ಕೆ.ಪಿ. (ಸಂಪಾಜೆ, ಸುಳ್ಯ ತಾಲೂಕು, ದಕ್ಷಿಣ ಕನ್ನಡ) – ಕಾರು ಡಿಕ್ಕಿ ಹೊಡೆದ ಆರೋಪಿ.
ಮಾರಕಾಸ್ತ್ರ ಹಲ್ಲೆ ಪ್ರಕರಣದಲ್ಲಿ ಬಂಧಿತರು:
ರಾಜು ಅಲಿಯಾಸ್ ಸೌದೆ ರಾಜು (ಮುಖ್ಯ ಆರೋಪಿ)
ಮೀರ್ ಹುಸೇನ್ ಅಲಿ ಅಲಿಯಾಸ್ ಸುಲ್ತಾನ್ (ಶಿವಪ್ಪ ಬಡಾವಣೆ, ಪಿರಿಯಾಪಟ್ಟಣ)
ನಯಾಜ್ ಅಹ್ಮದ್ (43 ವರ್ಷ, ರೌಡಿಶೀಟರ್, ಹುಣಸೂರು ಪಟ್ಟಣ)
ಹಬೀದ್ ಪಾಷಾ ಅಲಿಯಾಸ್ ಭಯ್ಯಾ (43 ವರ್ಷ, ಕುಖ್ಯಾತ ರೌಡಿ, ಶಾಂತಿನಗರ, ಮೈಸೂರು)
ಅಯಾಜ್ ಪಾಷಾ ಅಲಿಯಾಸ್ ಹೀರೋ (28 ವರ್ಷ, ಸುಣ್ಣದಕೆರೆ, ಮೈಸೂರು)
ಅಮೀನುಲ್ಲಾ (35 ವರ್ಷ, ಸುಣ್ಣದಕೆರೆ, ಮೈಸೂರು)
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಪ್ಪು ಬಣ್ಣದ ಪಲ್ಸರ್ 220 ಸಿಸಿ ಬೈಕ್, ಒಂದು ಕಾರು, ದಾಳಿಗೆ ಬಳಸಿದ್ದ ಲಾಂಗ್, 4 ಮೊಬೈಲ್ ಫೋನ್‌ಗಳು ಹಾಗೂ 10,000 ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹುಣಸೂರು ಉಪವಿಭಾಗದ ಡಿಎಸ್‌ಪಿ ಶ್ರೀ ರವಿ ಅವರ ನೇತೃತ್ವದಲ್ಲಿ, ಪಿರಿಯಾಪಟ್ಟಣ ಸಿಪಿಐ ಗೋವಿಂದರಾಜು ಎಂ.ವಿ., ಬೈಲಕುಪ್ಪೆ ಸಿಪಿಐ ದೀಪಕ್ ಎಂ.ಕೆ., ಪಿಎಸ್‌ಐಗಳಾದ ಜಗದೀಶ್ ಬಿ.ಹೆಚ್. (ಪಿರಿಯಾಪಟ್ಟಣ), ಅಜಯ್ ಕುಮಾರ್ ಡಿ.ಎನ್. (ಬೆಟ್ಟದಪುರ), ರವಿಕುಮಾರ್ (ಬೈಲಕುಪ್ಪೆ) ಹಾಗೂ ತಾಂತ್ರಿಕ ವಿಭಾಗದ ಎಎಸ್‌ಐ ವಸಂತ್ ಕುಮಾರ್ ಸೇರಿದಂತೆ ಸಿಬ್ಬಂದಿಗಳಾದ ಲಿಂಗರಾಜಪ್ಪ, ಮಧುಕುಮಾರ್, ರವೀಶ್, ಪ್ರಭಾಕರ್, ಮಹದೇವ್, ಬಸವರಾಜು, ರುದ್ರೇಶ್, ಸುರೇಶ್, ಈರಣ್ಣ, ಪುನೀತ್, ಅಣ್ಣಯ್ಯ ಮತ್ತು ಮೋಹಿನ್ ಯಲಗೋಡ ಅವರನ್ನೊಳಗೊಂಡ ತಂಡ ಈ ಜಟಿಲ ಪ್ರಕರಣವನ್ನು ಭೇದಿಸಿದೆ.
ಪೊಲೀಸ್ ತಂಡದ ಈ ಚಾಣಾಕ್ಷ ಹಾಗೂ ಯಶಸ್ವಿ ಕಾರ್ಯಾಚರಣೆಯನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ (ಎಸ್ಪಿ) ಶ್ರೀ ಮಲ್ಲಿಕಾರ್ಜುನ ಬಾಲದಂಡಿ (IPS) ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ (ಎಎಸ್ಪಿ) ಶ್ರೀ ಸಿ. ಮಲ್ಲಿಕ್ (KSPS) ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.