ಸಾಮಾನ್ಯವಾಗಿ ಪೊಲೀಸ್ ಠಾಣೆ ಎಂದರೆ ಜನಸಾಮಾನ್ಯರಲ್ಲಿ ಒಂದು ರೀತಿಯ ಆತಂಕ, ಗಂಭೀರ ವಾತಾವರಣ ಕಣ್ಣಮುಂದೆ ಬರುತ್ತದೆ. ಆದರೆ ರಾಜಧಾನಿಯ ಕೆಂಗೇರಿ ಪೊಲೀಸ್ ಠಾಣೆಗೆ ಒಮ್ಮೆ ಭೇಟಿ ನೀಡಿದರೆ ಈ ಕಲ್ಪನೆ ಸಂಪೂರ್ಣ ಬದಲಾಗುತ್ತದೆ. ಸಾರ್ವಜನಿಕ ಸ್ನೇಹಿ ಆಡಳಿತಕ್ಕೆ ಹೆಸರಾಗಿರುವ ಕೆಂಗೇರಿ ಪೊಲೀಸ್ ಠಾಣೆ, ಇದೀಗ ಜ್ಞಾನ ಮತ್ತು ಪರಿಸರ ಪ್ರೇಮದ ಅಪೂರ್ವ ಸಂಗಮವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಕೆಂಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆದ ಶ್ರೀ. ಜಗದೀಶ್ ಎನ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಈ ಸಕಾರಾತ್ಮಕ ಬದಲಾವಣೆ ಸಾಧ್ಯವಾಗಿದ್ದು, ಠಾಣೆಯ ಆವರಣ ಈಗ ಸಂಪೂರ್ಣ ಪರಿಸರ ಸ್ನೇಹಿ ಮತ್ತು ಜ್ಞಾನದೀಪ್ತಿಯ ಕೇಂದ್ರವಾಗಿ ಕಂಗೊಳಿಸುತ್ತಿದೆ.
ಠಾಣೆಯ ಒಳಗಡೆ ಜ್ಞಾನದ ಭಂಡಾರ: ಮಿನಿ ಲೈಬ್ರರಿ
ಠಾಣೆಯ ಒಳಗೆ ಹೆಜ್ಜೆ ಇಡುತ್ತಿದ್ದಂತೆ ಸಾರ್ವಜನಿಕರನ್ನು ಆಕರ್ಷಿಸುವುದು ಅಲ್ಲಿರುವ ಬೃಹತ್ ಕಬೋರ್ಡ್ ಮತ್ತು ಅದರಲ್ಲಿ ಜೋಡಿಸಿಟ್ಟಿರುವ ವೈವಿಧ್ಯಮಯ ಪುಸ್ತಕಗಳು. ಠಾಣೆಗೆ ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ಕಾಯುವ ಸಮಯದಲ್ಲಿ ಮೊಬೈಲ್ ನೋಡುತ್ತಾ ಕಾಲ ಕಳೆಯುವ ಬದಲು, ಜ್ಞಾನಾರ್ಜನೆ ಮಾಡಲಿ ಎಂಬ ಉದಾತ್ತ ಉದ್ದೇಶದಿಂದ ಈ ವಿನೂತನ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಠಾಣೆಗೆ ಬರುವ ಯಾರೇ ಆದರೂ ಇಲ್ಲಿ ಮುಕ್ತವಾಗಿ ಪುಸ್ತಕಗಳನ್ನು ತೆಗೆದುಕೊಂಡು ಓದಬಹುದಾಗಿದೆ.
ಕನ್ನಡದ ಜ್ಞಾನಪೀಠ ಪುರಸ್ಕೃತರ ಗೌರವ
ಕೇವಲ ಪುಸ್ತಕಗಳನ್ನಷ್ಟೇ ಇಡದೆ, ಆ ಕಬೋರ್ಡ್ಗಳ ಮೇಲೆ ಕನ್ನಡದ ಹೆಮ್ಮೆಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸುಂದರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಇದು ಕೇವಲ ಕಚೇರಿಯ ಅಂದವನ್ನು ಹೆಚ್ಚಿಸಿಲ್ಲ, ಬದಲಿಗೆ ಠಾಣೆಗೆ ಬರುವ ಪ್ರತಿಯೊಬ್ಬರಲ್ಲೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಮೂಡಿಸುವಂತೆ ಮಾಡಿದೆ. ಯುವ ಪೀಳಿಗೆಗೆ ನಮ್ಮ ಸಾಹಿತ್ಯ ದಿಗ್ಗಜರನ್ನು ಪರಿಚಯಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ.
ಹೊರಗಡೆ ಹಸಿರು ವಾತಾವರಣ: ಪರಿಸರ ಸ್ನೇಹಿ ಠಾಣೆ
ಕಚೇರಿಯ ಒಳಗಡೆ ಜ್ಞಾನದ ಬೆಳಕಿದ್ದರೆ, ಠಾಣೆಯ ಹೊರಭಾಗಕ್ಕೆ ಬಂದರೆ ಮನಸ್ಸಿಗೆ ಮುದ ನೀಡುವ ಪರಿಸರ ಸ್ನೇಹಿ ವಾತಾವರಣವಿದೆ. ಇನ್ಸ್ಪೆಕ್ಟರ್ ಅವರ ವಿಶೇಷ ಆಸಕ್ತಿಯಿಂದ ಠಾಣೆಯ ಆವರಣವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಲಾಗಿದ್ದು, ಸಾರ್ವಜನಿಕರಿಗೆ ನೆಮ್ಮದಿಯ ಅನುಭವ ನೀಡುತ್ತದೆ. ಕಾಂಕ್ರೀಟ್ ಕಾಡಿನಂತಿರುವ ಬೆಂಗಳೂರಿನಲ್ಲಿ ಈ ಪೊಲೀಸ್ ಠಾಣೆ ಒಂದು ಪುಟ್ಟ ಹಸಿರು ದ್ವೀಪದಂತೆ ಭಾಸವಾಗುತ್ತಿದೆ.
ಗೋಡೆಗಳ ಮೇಲೆಯೂ ಮಾತನಾಡುವ ಸ್ನೇಹ ಮತ್ತು ಜವಾಬ್ದಾರಿ
ಈ ವಿನೂತನ ಬದಲಾವಣೆಯ ಭಾಗವಾಗಿ ಠಾಣೆಯ ಹೊರಗಿನ ಕಾಂಪೌಂಡ್ ಗೋಡೆಯ ಮೇಲೆ ಅತ್ಯಂತ ಪರಿಣಾಮಕಾರಿಯಾದ ಭಿತ್ತಿಚಿತ್ರಗಳನ್ನು ರಚಿಸಲಾಗಿದ್ದು, ಇವು ಕೇವಲ ಬಣ್ಣಗಳಲ್ಲದೆ ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ನಂಬಿಕೆಯ ಸಂಕೇತಗಳಾಗಿವೆ. “ಪೊಲೀಸ್: ಭಯವಲ್ಲ ನಂಬಿಕೆ”, ಎಂಬ ಕನ್ನಡ ಶೀರ್ಷಿಕೆಯು ಬಾಂಧವ್ಯ ಬೆಳೆಸುವಂತದ್ದು. ಇನ್ನೂ ಹಲವಾರು ವರ್ಣ ರಂಜಿತ ಕಲಾತ್ಮಕ ರಚನೆಗಳು, ಭೌಗೋಳಿಕ ವ್ಯಾಪ್ತಿಯ ವರ್ಣರಂಜಿತ ನಕ್ಷೆಯನ್ನು ಬಿಡಿಸುವ ಮೂಲಕ ಇಲಾಖೆಯ ಸ್ಪಷ್ಟ ಜವಾಬ್ದಾರಿ, ಕರ್ತವ್ಯ ನಿಷ್ಠೆ ಮತ್ತು ಪಾರದರ್ಶಕತೆಯನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗಿದೆ.
ಠಾಣೆಗೆ ಬರುವ ಸಾರ್ವಜನಿಕರು ಯಾವುದೇ ಭಯ ಅಥವಾ ಆತಂಕವಿಲ್ಲದೆ ಬರಬೇಕು. ಕಾಯುವ ಸಮಯದಲ್ಲಿ ಅವರಿಗೆ ಧನಾತ್ಮಕ ಚಿಂತನೆ ಮೂಡಲು ಪುಸ್ತಕಗಳು ನೆರವಾಗುತ್ತವೆ. ಪರಿಸರ ಮತ್ತು ಸಾಹಿತ್ಯ ನಮ್ಮ ಬದುಕಿನ ಭಾಗವಾಗಬೇಕು ಎನ್ನುವುದೇ ನಮ್ಮ ತಂಡದ ಆಶಯ ಎಂದು ಇನ್ಸ್ಪೆಕ್ಟರ್ ಅಭಿಪ್ರಾಯ ಪಟ್ಟಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಮಾಜಕ್ಕೆ ಸಾಹಿತ್ಯ ಮತ್ತು ಪರಿಸರದ ಸಂದೇಶ ನೀಡುತ್ತಿರುವ ಕೆಂಗೇರಿ ಪೊಲೀಸ್ ಠಾಣೆಯ ಈ ಕಾರ್ಯ ಇತರ ಠಾಣೆಗಳಿಗೂ ಮಾದರಿಯಾಗಿದೆ. ಇನ್ಸ್ಪೆಕ್ಟರ್ ಜಗದೀಶ್ ಮತ್ತು ಅವರ ಇಡೀ ಸಿಬ್ಬಂದಿ ವರ್ಗದ ಈ ಹೆಜ್ಜೆ ನಿಜಕ್ಕೂ ಶ್ಲಾಘನೀಯ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್ – ವಕೀಲರು ಹಾಗು ಸಂಪಾದಕರು, ಆರಕ್ಷಕರ ಟೈಮ್ಸ್ ಮೀಡಿಯಾ


