ಕಲಬುರಗಿ / ಬೆಳಗಾವಿ:
ಉತ್ತಮ ಸೇವೆಗಾಗಿ ಮುಖ್ಯಮಂತ್ರಿಗಳ ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು, ಇದೀಗ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ತಡರಾತ್ರಿ ನಡೆದಿದೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್ಐ ವಿಶ್ವನಾಥ ಮುದರೆಡ್ಡಿ ಹಾಗೂ ಅದೇ ಠಾಣೆಯ ಸಿಬ್ಬಂದಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರ ದಾಳಿಗೆ ಸಿಲುಕಿ ಬಂಧನಕ್ಕೊಳಗಾಗಿದ್ದಾರೆ.
ಅಕ್ಕಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸಹಕಾರ ನೀಡಲು ಯಡ್ರಾಮಿ ಪಿಎಸ್ಐ ವಿಶ್ವನಾಥ ಮುದರೆಡ್ಡಿ ಅವರು ಆನಂದ್ ಕುಸ್ತಿ ಎಂಬುವವರಿಗೆ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಂತೆ ಇದೇ ತಿಂಗಳ 12ನೇ ತಾರೀಖಿನಂದು ‘ಫೋನ್ ಪೇ’ (PhonePe) ಮೂಲಕ ಈಗಾಗಲೇ 20 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲಾಗಿತ್ತು. ಆದರೆ, ಮತ್ತೊಮ್ಮೆ 30 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಮುಂದುವರಿಸಿದ್ದರು.
ಲಂಚದ ಹಣದಲ್ಲಿ ₹20 ಸಾವಿರ ರೂಪಾಯಿಗಳನ್ನು ಯಡ್ರಾಮಿ ಪೊಲೀಸ್ ಠಾಣೆಯ ಆವರಣದಲ್ಲೇ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿ, ಪಿಎಸ್ಐ ಹಾಗೂ ಸಿಬ್ಬಂದಿಯನ್ನು ರಂಗೇಹಾತಾಗಿ (ಲಂಚದ ಹಣದ ಸಮೇತ) ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ಅರುಣ್ ಮರಗುಂಡಿ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಸದ್ಯ ಬಂಧಿತ ಆರೋಪಿಗಳನ್ನು ಕಲಬುರಗಿ ನಗರದ ಐವಾನ್ ಶಾಹಿ ಅತಿಥಿಗೃಹದ ಆವರಣದಲ್ಲಿರುವ ಲೋಕಾಯುಕ್ತ ಕಚೇರಿಗೆ ಕರೆತರಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಬಂಧಿತ ಪಿಎಸ್ಐ ವಿಶ್ವನಾಥ ಮುದರೆಡ್ಡಿ ಅವರು ಈ ಹಿಂದೆ ಗಂಭೀರ ಪ್ರಕರಣಗಳ ಪತ್ತೆ ಹಾಗೂ ಆರೋಪಿಗಳ ಬಂಧನದಲ್ಲಿ ತೋರಿದ ಅತ್ಯುತ್ತಮ ಕಾರ್ಯಕ್ಷಮತೆಗಾಗಿ 2024-25ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರತಿಷ್ಠಿತ ‘ಮುಖ್ಯಮಂತ್ರಿಗಳ ಚಿನ್ನದ ಪದಕ’ ಮುಡಿಗೇರಿಸಿಕೊಂಡಿದ್ದರು. ಸಾಧನೆ ಮಾಡಿ ಪದಕ ಪಡೆದಿದ್ದ ಅಧಿಕಾರಿಯೇ ಇದೀಗ ಭ್ರಷ್ಟಾಚಾರದ ಆರೋಪದಡಿ ಲೋಕಾಯುಕ್ತರ ಬಲೆಗೆ ಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.