ಬೆಂಗಳೂರು: ತಂತ್ರಜ್ಞಾನ ನಗರಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಸೈಬರ್ ವಂಚನೆಗಳು ಹಾಗೂ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ಮತ್ತು ಕಾರ್ಪೊರೇಟ್ ವಲಯದ ಉದ್ಯೋಗಿಗಳಲ್ಲಿ ಸುರಕ್ಷತೆಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಬೇಗೂರು ಪೊಲೀಸ್ ಠಾಣೆಯ ವತಿಯಿಂದ ಮಹತ್ವದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಸಂಸ್ಥೆಯಾದ ಜೆಪ್ಟೋ (Zepto) ಕಚೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ವಿಶೇಷ ‘ಬೀಟ್ ಸಭೆ ಮತ್ತು ಅಪರಾಧ ಜಾಗೃತಿ ಕಾರ್ಯಕ್ರಮ’ದಲ್ಲಿ ನೂರಾರು ಉದ್ಯೋಗಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಬೇಗೂರು ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ (ASI) ಸತೀಶ್ ಹಾಗೂ ಪೊಲೀಸ್ ಕಾನ್ಸ್ಟೆಬಲ್ (PC) ರಮೇಶ್ ಅವರು ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದರು. ವಿಶೇಷವಾಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ರಾಜ್ಯದ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಅಧಿಕಾರಿಗಳು, ಅಪರಿಚಿತ ನಗರದಲ್ಲಿ ಸುರಕ್ಷಿತವಾಗಿರಲು ಅನುಸರಿಸಬೇಕಾದ ಪ್ರಮುಖ ಕ್ರಮಗಳ ಬಗ್ಗೆ ವಿವರಿಸಿದರು.
ಸೈಬರ್ ಸುರಕ್ಷತೆ: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪಾರ್ಟ್-ಟೈಮ್ ಜಾಬ್ ಆಫರ್, ನಕಲಿ ಲಿಂಕ್ಗಳು, ಓಟಿಪಿ (OTP) ವಂಚನೆ ಹಾಗೂ ಡಿಜಿಟಲ್ ಅರೆಸ್ಟ್ನಂತಹ ಸೈಬರ್ ವಂಚನೆಗಳ ಜಾಲಕ್ಕೆ ಬೀಳದಂತೆ ಉದ್ಯೋಗಿಗಳಿಗೆ ಜಾಗೃತಿ ಮೂಡಿಸಲಾಯಿತು.
ತುರ್ತು ಸಹಾಯವಾಣಿ ಸಂಖ್ಯೆಗಳು: ಯಾವುದೇ ತುರ್ತು ಸಂದರ್ಭ ಎದುರಾದಾಗ ತಕ್ಷಣವೇ ಪೊಲೀಸರ ನೆರವು ಪಡೆಯಲು ಕೇಂದ್ರಿಕೃತ ತುರ್ತು ಸಹಾಯವಾಣಿ ಸಂಖ್ಯೆ ‘112’ ಮತ್ತು ಸೈಬರ್ ವಂಚನೆಗೊಳಗಾದ ತಕ್ಷಣ ಕರೆ ಮಾಡಬೇಕಾದ ‘1930’ ಸಂಖ್ಯೆಗಳ ಬಳಕೆಯ ಬಗ್ಗೆ ಮಾಹಿತಿ ನೀಡಲಾಯಿತು.
ಅಪರಾಧ ತಡೆ ಮತ್ತು ಸಹಕಾರ: ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಸಾರ್ವಜನಿಕರ ಪಾತ್ರ ದೊಡ್ಡದಾಗಿದ್ದು, ಕಚೇರಿ ಹಾಗೂ ವಸತಿ ಪರಿಸರದಲ್ಲಿ ಯಾವುದೇ ರೀತಿಯ ಶಂಕಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಯಿತು.
ಪೊಲೀಸ್ ಇಲಾಖೆಯು ಸಾರ್ವಜನಿಕರ ಹತ್ತಿರಕ್ಕೆ ಬಂದು ಸುರಕ್ಷತೆಯ ಪಾಠ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ಜಾಗೃತಿಯನ್ನು ಹೆಚ್ಚಿಸುತ್ತವೆ ಎಂದು ಜೆಪ್ಟೋ ಕಚೇರಿಯ ಉದ್ಯೋಗಿಗಳು ಹಾಗೂ ಆಡಳಿತ ಮಂಡಳಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.
ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಸಾಕ್ಷಿಯಾದ ಬೇಗೂರು ಪೊಲೀಸರ ಈ ಸಮಯೋಚಿತ ಜನಜಾಗೃತಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
