ವಿಜಯಪುರ: ಸರ್ಕಾರಿ ಕಚೇರಿ ವೇಳೆಯಲ್ಲೇ ಕರ್ತವ್ಯಕ್ಕೆ ಚಕ್ಕರ್ ಹಾಕಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಅಧಿಕಾರಿ ಹಾಗೂ ಸಿಬ್ಬಂದಿಗಳು ಡಾಬಾವೊಂದರಲ್ಲಿ ಮದ್ಯಪಾನ ಪಾರ್ಟಿಯಲ್ಲಿ ಮುಳುಗಿದ್ದ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ಬೆಳಕಿಗೆ ಬಂದಿದೆ.
ಹೊಲಗಾಲುವೆ ವಿಭಾಗದ ಮ್ಯಾನೇಜರ್ ಶಶಿಧರ್ ಚೌಹಾನ್, ದ್ವಿತೀಯ ದರ್ಜೆ ಸಹಾಯಕ ಮುರಳೀಧರ್ ಕುಲಕರ್ಣಿ ಹಾಗೂ ಕಚೇರಿ ಸಿಪಾಯಿ ಶಂಕರಯ್ಯ ಮಟಮಟ ಮಧ್ಯಾಹ್ನವೇ ಗುಂಡು ಪಾರ್ಟಿಯಲ್ಲಿ ಭಾಗಿಯಾಗಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಚೇರಿ ಕೆಲಸದ ಅವಧಿಯಲ್ಲೇ ಈ ಮೂವರು ಸಿಬ್ಬಂದಿಗಳು ಸ್ಥಳೀಯ ಡಾಬಾವೊಂದರಲ್ಲಿ ಮದ್ಯದ ಗ್ಲಾಸ್ ಹಿಡಿದು ಕುಳಿತಿದ್ದ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
ಈ ಸಿಬ್ಬಂದಿಗಳಿಗೆ ಮಧ್ಯಾಹ್ನದ ವೇಳೆಯಲ್ಲಿ ಕಚೇರಿಗೆ ಗೈರಾಗಿ ಬಾರ್ ಹಾಗೂ ಡಾಬಾಗಳಲ್ಲಿ ಎಣ್ಣೆ ಪಾರ್ಟಿ ಮಾಡುವುದು ನಿತ್ಯದ ಚಾಳಿಯಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಇದರಿಂದಾಗಿ ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ರೈತರು ಕೆಲಸಗಳಾಗದೆ ನಿತ್ಯವೂ ಅಲೆಯುವಂತಾಗಿದೆ. ಈ ಹಿಂದೆ ಹಲವು ಬಾರಿ ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಜನಸಾಮಾನ್ಯರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಸರ್ಕಾರಿ ನೌಕರರೇ ಈ ರೀತಿ ಕರ್ತವ್ಯ ಲೋಪವೆಸಗಿ, ಮದ್ಯಪಾನದಲ್ಲಿ ತೊಡಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು, ಡ್ಯೂಟಿ ಟೈಂನಲ್ಲೇ ಮದ್ಯದ ಅಮಲಿನಲ್ಲಿ ತೇಲಾಡಿದ ಸಿಬ್ಬಂದಿಗಳ ವಿರುದ್ಧ ಇಲಾಖಾ ಮಟ್ಟದ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
