Share News

ಬೆಂಗಳೂರು: ನಗರದ ಐಟಿ ಹಬ್ ಎಲೆಕ್ಟ್ರಾನಿಕ್ಸ್ ಸಿಟಿ ವ್ಯಾಪ್ತಿಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಖಾಸಗಿ ಜಾಗ ಪ್ರವೇಶಿಸಿದ ವಿಚಾರವಾಗಿ ನಡೆದ ವಾಗ್ವಾದದಲ್ಲಿ ನಿವೃತ್ತ ಬಿಎಂಟಿಸಿ ಕಂಡಕ್ಟರ್ ಒಬ್ಬರ ಮೇಲೆ ಚಾಕು ದಾಳಿ ನಡೆಸಲಾಗಿದೆ. ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಮಲೆಯಾಳಿ ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

​ಎಲೆಕ್ಟ್ರಾನಿಕ್ಸ್ ಸಿಟಿ 2ನೇ ಹಂತದಲ್ಲಿ ಈ ಗಲಭೆ ಸಂಭವಿಸಿದ್ದು, ಜಮೀನಿನ ಮಾಲೀಕರೂ ಆಗಿರುವ ನಿವೃತ್ತ ಬಿಎಂಟಿಸಿ ಕಂಡಕ್ಟರ್ ರಾಮಚಂದ್ರ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿನ್ನೆ ಸಂಜೆ ಕ್ಯಾಬ್‌ನಲ್ಲಿ ಬಂದಿದ್ದ ಇಬ್ಬರು ಮಲೆಯಾಳಿ ಯುವಕರು ರಾಮಚಂದ್ರ ಅವರಿಗೆ ಸೇರಿದ ಖಾಸಗಿ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ. ಇದನ್ನು ರಾಮಚಂದ್ರ ಅವರು ಪ್ರಶ್ನಿಸಿದಾಗ, ಯುವಕರು ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ಉನ್ಮಾದಕ್ಕೆ ಒಳಗಾದ ಯುವಕರು ರಾಮಚಂದ್ರ ಅವರ ಮೇಲೆ ಚಾಕುವಿನಿಂದ ಹಿಂಸಾತ್ಮಕವಾಗಿ ಹಲ್ಲೆ ನಡೆಸಿದ್ದಾರೆ.

ಕೃತ್ಯ ಎಸಗಿದ ಬಳಿಕ ಆರೋಪಿಗಳು ಅದೇ ಕ್ಯಾಬ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಎಲೆಕ್ಟ್ರಾನಿಕ್ಸ್ ಸಿಟಿಯ ಭೀಕರ ಟ್ರಾಫಿಕ್ ಜಾಮ್‌ನಲ್ಲಿ ಅವರ ವಾಹನ ಸಿಲುಕಿಕೊಂಡಿದೆ. ಇದರಿಂದ ಗಾಬರಿಗೊಂಡ ಯುವಕರು ವಾಹನ ಬಿಟ್ಟು ಸಮೀಪದ ಬೇಕರಿಯೊಂದಕ್ಕೆ ನುಗ್ಗಿದ್ದಾರೆ. ಈ ವೇಳೆ ಬೇಕರಿಯಲ್ಲಿದ್ದ ಸಾರ್ವಜನಿಕರ ಮೇಲೆಯೂ ಕೈಯಲ್ಲಿದ್ದ ಗಾಜಿನ ಬಾಟಲಿಗಳಿಂದ ಮನಬಂದಂತೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಹರೀಶ್ ಮತ್ತು ಶಿವ ಸೇರಿದಂತೆ ಹಲವರಿಗೆ ಗಾಯಗಳಾಗಿವೆ.

​ಸ್ಥಳೀಯ ಸಾರ್ವಜನಿಕರು ಧೈರ್ಯ ಪ್ರದರ್ಶಿಸಿ ಇಬ್ಬರೂ ಆರೋಪಿಗಳನ್ನು ಬೇಕರಿಯೊಳಗೆ (ಬಂಧಿಸಿ), ತಕ್ಷಣವೇ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳ ಬ್ಯಾಗ್ ಅನ್ನು ಪರಿಶೀಲಿಸಿದಾಗ ಕೆಲವು ಅನುಮಾನಾಸ್ಪದ ಸಣ್ಣ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಇವು ಮಾದಕ ವಸ್ತುಗಳು (ಡ್ರಗ್ಸ್) ಇರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ. ದಾಳಿಯ ಸಂಪೂರ್ಣ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

​ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಹಿನ್ನೆಲೆ ಹಾಗೂ ಅವರು ಬೆಂಗಳೂರಿಗೆ ಬಂದ ಉದ್ದೇಶದ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

​ವರದಿ: ಗಿಲ್ಬರ್ಟ್. ಜೆ

 


Share News