Share News

ದಾವಣಗೆರೆ: ದಿನಾಲೂ ಕುಡಿದು ಬಂದು ರಂಪಾಟ ಮಾಡುತ್ತಿದ್ದ ಗಂಡನ ಕಾಟ ತಾಳಲಾರದೆ ಪತ್ನಿಯೇ ಆತನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ನಡೆದಿದೆ. ಕೃತ್ಯದ ಬಳಿಕ ತಂದೆಯ ಶವವನ್ನು ಸಾಗಿಸಲು ಹೆತ್ತ ಮಗನೇ ತಾಯಿಗೆ ಸಾಥ್ ನೀಡಿದ್ದು, ಇದೀಗ ಇಬ್ಬರೂ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.

ಚಿಕ್ಕಬಿದರಿ ಗ್ರಾಮದ ನಿವಾಸಿ ಶಿವಪ್ಪ (42) ಜಮೀನು ಕೆಲಸ ಮಾಡಿಕೊಂಡಿದ್ದನು. ಆದರೆ ಈತನಿಗೆ ತೀವ್ರ ಕುಡಿತದ ವ್ಯಸನವಿತ್ತು. ಪ್ರತಿದಿನ ಕುಡಿದು ಬಂದು ಪತ್ನಿ ಸಾವಿತ್ರಿ ಜೊತೆ ಅನಗತ್ಯವಾಗಿ ಜಗಳವಾಡಿ ಹಿಂಸೆ ನೀಡುವುದು ಶಿವಪ್ಪನಿಗೆ ಹವ್ಯಾಸವಾಗಿಬಿಟ್ಟಿತ್ತು. ಇತ್ತೀಚೆಗೆ ಈತನ ಕಿರುಕುಳ ಮಿತಿ ಮೀರಿತ್ತು. ಜೂನ್ 23 ರಂದು ಎಂದಿನಂತೆ ರಾತ್ರಿ ಪೂರ್ತಿ ಕುಡಿದು ಬಂದು ಮನೆಯಲ್ಲಿ ಶಿವಪ್ಪ ತೀವ್ರ ಗಲಾಟೆ ಮಾಡಿದ್ದಾನೆ. ಇದರಿಂದ ಮಿತಿ ಮೀರಿದ ಆಕ್ರೋಶಗೊಂಡ ಪತ್ನಿ ಸಾವಿತ್ರಿ, ಗಂಡನ ಕಾಟಕ್ಕೆ ಶಾಶ್ವತ ಮುಕ್ತಿ ನೀಡಲು ನಿರ್ಧರಿಸಿ ಮನೆಯಲ್ಲಿದ್ದ ಕಲ್ಲಿನಿಂದ ತಲೆಗೆ ಬಲವಾಗಿ ಜಜ್ಜಿ ಆತನನ್ನು ದಾರುಣವಾಗಿ ಕೊಲೆ ಮಾಡಿದ್ದಾಳೆ.

ಸಾವಿತ್ರಿ ಈ ಭೀಕರ ಕೃತ್ಯ ಎಸಗಿದಾಗ ಆಕೆಯ ಮಗ ಹನುಮೇಗೌಡ ಮನೆಯಲ್ಲಿ ಇರಲಿಲ್ಲ. ಬಳಿಕ ಮನೆಗೆ ಬಂದ ಮಗ, ತಂದೆ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾನೆ. ಆದರೆ, ಕೊಲೆಗಡುಕಿ ತಾಯಿಯನ್ನು ಪೊಲೀಸರ ಕೈಯಿಂದ ಹಾಗೂ ಕಾನೂನಿನ ಶಿಕ್ಷೆಯಿಂದ ರಕ್ಷಿಸಲೇಬೇಕೆಂಬ ಜಿದ್ದಿಗೆ ಬಿದ್ದ ಮಗ, ತಂದೆಯ ಶವವನ್ನು ಬೇರೆಡೆಗೆ ಸಾಗಿಸಿ ಸಾಕ್ಷ್ಯ ನಾಶಪಡಿಸಲು ತಾಯಿಗೆ ಸಾಥ್ ನೀಡಿದ್ದಾನೆ. ತಡರಾತ್ರಿ ಇಬ್ಬರೂ ಸೇರಿ ಶವವನ್ನು ಮನೆಯ ಹಿತ್ತಲಿಗೆ ಸಾಗಿಸಿದ್ದಾರೆ.

ಮರುದಿನ ಮನೆಯ ಹಿತ್ತಲಿನಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಶಿವಪ್ಪನ ಶವವನ್ನು ಕಂಡು ಅನುಮಾನಗೊಂಡ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು, ಸುಕೋ (FSL) ಟೀಮ್, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದೊಂದಿಗೆ ಪ್ರಾಥಮಿಕ ಪರಿಶೀಲನೆ ನಡೆಸಿದ್ದರು. ಮೊದಲಿಗೆ ಇದೊಂದು ನಿಗೂಢ ಕೊಲೆಯಂತೆ ಕಂಡುಬಂದಿತ್ತು.

​ಆದರೆ, ಘಟನಾ ಸ್ಥಳದಲ್ಲಿ ಕಂಡುಬಂದ ಸಾಕ್ಷ್ಯಗಳು ಹಾಗೂ ಮನೆಯವರ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ಚುರುಕುಗೊಳಿಸಿದರು. ಸಂಶಯದ ಮೇರೆಗೆ ಪತ್ನಿ ಸಾವಿತ್ರಿ ಹಾಗೂ ಮಗ ಹನುಮೇಗೌಡನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಇಬ್ಬರ ಪಾಪದ ಪುರಾಣ ಮತ್ತು ಕೊಲೆಯ ಅಸಲಿ ಸತ್ಯ ಬಯಲಾಗಿದೆ. ಸದ್ಯ ಹರಿಹರ ಗ್ರಾಮಾಂತರ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕುಟುಂಬದ ಕಲಹ ಹಾಗೂ ಕುಡಿತದ ತಾಪತ್ರಯಕ್ಕೆ ಪತಿಯೇ ಹೆಣವಾಗಿ, ತಾಯಿ-ಮಗ ಕಂಬಿ ಎಣಿಸುತ್ತಿರುವುದು ಹರಿಹರ ಜನತೆಯನ್ನು ದಿಗ್ಭ್ರಮೆಗೊಳಿಸಿದೆ.

 


Share News