Share News

ಮಧುಗಿರಿ: ತಾಲೂಕಿನಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ ಜಾಲದ ವಿರುದ್ಧ ಅಬಕಾರಿ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ಇಟ್ಟಿದ್ದು, ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

​ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗೇಟ್ ಹಾಗೂ ಹನುಮಂತಪುರ ಕ್ರಾಸ್ ಬಳಿ ಈ ದಾಳಿ ನಡೆದಿದೆ. ಲೋಕೇಶ್, ನರಸಿಂಹರಾಜು ಮತ್ತು ಹೇಮಂತ್ ಬಂಧಿತ ಆರೋಪಿಗಳಾಗಿದ್ದಾರೆ.

ಬೇಡತ್ತೂರು ಗೇಟ್ ಮತ್ತು ಹನುಮಂತಪುರ ಕ್ರಾಸ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹಾಗೂ ಯುವಕರಿಗೆ ಅಕ್ರಮವಾಗಿ ಒಣ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಬಕಾರಿ ಇಲಾಖೆಗೆ ಲಭ್ಯವಾಗಿತ್ತು. ಈ ಸುಳಿವಿನ ಆಧಾರದ ಮೇಲೆ ಎಚ್ಚೆತ್ತ ಅಧಿಕಾರಿಗಳ ತಂಡ ಸತತ ಮೂರು ದಿನಗಳ ಕಾಲ ರಹಸ್ಯವಾಗಿ ಜಾಲವನ್ನು ಬೆನ್ನಟ್ಟಿ, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹೆಡೆಮುರಿಕಟ್ಟಿದ್ದಾರೆ.

​ವಶಪಡಿಸಿಕೊಂಡ ಮಾಲು: ಬಂಧಿತ ಆರೋಪಿಗಳಿಂದ ಸುಮಾರು 160 ಗ್ರಾಂ ತೂಕದ ಒಣ ಗಾಂಜಾ ಹಾಗೂ ಮಾದಕ ವಸ್ತು ಸಾಗಾಟಕ್ಕೆ ಬಳಸುತ್ತಿದ್ದ ಎರಡು ದ್ವಿಚಕ್ರ ವಾಹನಗಳನ್ನು (ಬೈಕ್) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಬಕಾರಿ ಇಲಾಖೆಯ ಡಿವೈಎಸ್‌ಪಿ ದೀಪಕ್ ಅವರ ಸಮರ್ಥ ನೇತೃತ್ವದಲ್ಲಿ ಈ ಯಶಸ್ವಿ ದಾಳಿ ನಡೆದಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ (ಇನ್ಸ್‌ಪೆಕ್ಟರ್‌) ಲೋಕೇಶ್ ಹಾಗೂ ಇಲಾಖೆಯ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಬಂಧಿತ ಆರೋಪಿಗಳ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

 


Share News