ಕುಶಾಲನಗರ: ಪ್ರವಾಸಿ ತಾಣ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರವಾದ ಕುಶಾಲನಗರ ಪಟ್ಟಣದ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಾನುವಾರುಗಳ ಸಂಚಾರ ಮಿತಿಮೀರಿದ್ದು, ವಾಹನ ಸವಾರರ ಪಾಲಿಗೆ ಇವು ಕಂಟಕವಾಗಿ ಪರಿಣಮಿಸಿವೆ. ಮೇವು ನೀಡಲು ಅಸಮರ್ಥರಾದ ದನದ ಮಾಲೀಕರು ತಮ್ಮ ಜಾನುವಾರುಗಳನ್ನು ರಸ್ತೆಗೇ ಬಿಡುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಗಲು-ರಾತ್ರಿ ಎನ್ನದೆ ಪಟ್ಟಣದ ಪ್ರಮುಖ ವೀದಿಗಳಲ್ಲಿ ದನಗಳು ಹಿಂಡುಹಿಂಡಾಗಿ ಗಿರಕಿ ಹೊಡೆಯುತ್ತಿವೆ. “ಹುಲ್ಲನ್ನಾದರೂ ತಿನ್ನಲಿ ಅಥವಾ ಕಸದ ತೊಟ್ಟಿಯ ಪ್ಲಾಸ್ಟಿಕ್ ಅನ್ನಾದರೂ ತಿನ್ನಲಿ, ನಮಗೆ ಲೀಟರ್‌ಗಟ್ಟಲೆ ಹಾಲು ನೀಡಿದರೆ ಸಾಕು” ಎಂಬ ಮಾಲೀಕರ ಕಠೋರ ಧೋರಣೆಯೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಕನಿಷ್ಠ ಮೇವು ನೀಡಲಾಗದವರು ದನಗಳನ್ನು ಏಕೆ ಸಾಕಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಜಾನುವಾರುಗಳನ್ನು ಹೀಗೆ ಸಾರ್ವಜನಿಕ ರಸ್ತೆಯಲ್ಲಿ ಅನಾಥವಾಗಿ ಬಿಡುವುದು ‘1966ರ ಕರ್ನಾಟಕ ಅತಿಕ್ರಮಣ ಕಾಯ್ದೆ’ ಪ್ರಕಾರ ಸ್ಪಷ್ಟ ಅಪರಾಧವಾಗಿದ್ದರೂ, ಮಾಲೀಕರು ಮಾತ್ರ ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ.
ರಸ್ತೆ ಮಧ್ಯೆ ದನಗಳು ಅಡ್ಡಾದಿಡ್ಡಿ ಓಡಾಡುವುದರಿಂದ ವಾಹನ ಚಾಲಕರಿಗೆ ಮತ್ತು ಸ್ವತಃ ಮೂಕಪ್ರಾಣಿಗಳಿಗೂ ಅಪಾಯ ತಪ್ಪಿದ್ದಲ್ಲ. ರಸ್ತೆಯಲ್ಲಿ ಸಾಗುವಾಗ ವಾಹನಗಳು ಡಿಕ್ಕಿಯಾಗಿ ಈಗಾಗಲೇ ಹಲವು ದನಗಳು ಕುಂಟುತ್ತಾ ಸಾಗುತ್ತಿರುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿದೆ.
”ಇತ್ತೀಚೆಗೆ ರಸ್ತೆ ಮಧ್ಯೆ ನಿಂತಿದ್ದ ದನವೊಂದನ್ನು ತಪ್ಪಿಸಲು ಹೋಗಿ ಬೈಕ್ ಸವಾರನೊಬ್ಬ ಬಲಬದಿಗೆ ತಿರುಗಿಸಿದಾಗ, ಹಿಂಬದಿಯಿಂದ ಬಂದ ಮತ್ತೊಂದು ವಾಹನ ಡಿಕ್ಕಿಯಾಗಿ ಸವಾರ ತೀವ್ರವಾಗಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ಇಂತಹ ಅಪಘಾತಗಳು ದಿನನಿತ್ಯ ಸಂಭವಿಸುತ್ತಲೇ ಇವೆ.”
— ಪ್ರತ್ಯಕ್ಷದರ್ಶಿಗಳು
ಹೆದ್ದಾರಿಯಲ್ಲಿ ಕುಳಿತುಕೊಳ್ಳುವ ಜಾನುವಾರುಗಳಿಂದಾಗಿ ಸುಗಮ ಸಂಚಾರಕ್ಕೆ ಭಾರೀ ಅಡ್ಡಿಯಾಗುತ್ತಿದ್ದು, ರಾತ್ರಿ ವೇಳೆಯಂತೂ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಾಗಬೇಕಿದೆ. ಇನ್ನಾದರೂ ಕುಶಾಲನಗರ ಪುರಸಭೆ ಅಧಿಕಾರಿಗಳು ಜಾಗೃತರಾಗಬೇಕಿದೆ. ರಸ್ತೆಗೆ ದನಗಳನ್ನು ಬಿಡುವ ಮಾಲೀಕರನ್ನು ಪತ್ತೆ ಹಚ್ಚಿ, ಅವರಿಗೆ ಭಾರೀ ದಂಡ ವಿಧಿಸುವ ಜೊತೆಗೆ ಕಾನೂನಿನ ಚಾಟಿ ಬೀಸಬೇಕಾದ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.