Share News

ಬೆಂಗಳೂರು/ಹೆಬ್ಬಗೋಡಿ: ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಬರೊಬ್ಬರಿ 16 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಬ್ಬಗೋಡಿ ಪೊಲೀಸ್ ಠಾಣಾ ಸರಹದ್ದಿನ ತಿರುಪಾಳ್ಯ ಕೆರೆಯ ಬಳಿ ಇಬ್ಬರು ಆಸಾಮಿಗಳು ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಕಾನೂನುಬಾಹಿರವಾಗಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಹೆಬ್ಬಗೋಡಿ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸ್ಥಳದ ಮೇಲೆ ದಾಳಿ ಮಾಡಿದ್ದಾರೆ.

​16 ಕೆಜಿ ಮಾದಕ ವಸ್ತು ಜಪ್ತಿ: ದಾಳಿಯ ವೇಳೆ ಸಿಕ್ಕಿಬಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿತರ ಬಳಿ ಇದ್ದ ಒಟ್ಟು 16 ಕೆಜಿ ತೂಕದ ಗಾಂಜಾ ಮಾದಕ ದ್ರವ್ಯವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಹಿಡಿದಿಟ್ಟಿರುವ ಗಾಂಜಾದ ಮೌಲ್ಯ ಲಕ್ಷಾಂತರ ರೂಪಾಯಿ ಆಗಿರಬಹುದೆಂದು ಅಂದಾಜಿಸಲಾಗಿದೆ. ಈ ಇಬ್ಬರು ಆರೋಪಿಗಳಿಗೆ ಗಾಂಜಾ ಎಲ್ಲಿಂದ ಪೂರೈಕೆಯಾಗುತ್ತಿತ್ತು? ಇದರ ಹಿಂದೆ ಬೇರೆ ಯಾವುದಾದರೂ ದೊಡ್ಡ ಜಾಲ ಅಡಗಿದೆಯೇ? ಹಾಗೂ ಯಾರಿಗೆಲ್ಲಾ ಇದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂಬ ನಿಟ್ಟಿನಲ್ಲಿ ಹೆಬ್ಬಗೋಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

 


Share News