Share News

ಹಲಗೂರು: ಇಲ್ಲಿಗೆ ಸಮೀಪದ ಚನ್ನಪಟ್ಟಣ ರಸ್ತೆಯಲ್ಲಿರುವ ಅಂಡನಹಳ್ಳಿ ಗ್ರಾಮದ ಕೃಷಿ ಜಮೀನೊಂದರಲ್ಲಿ ಬರೋಬ್ಬರಿ 10 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಬಳಿಕ ಸ್ಥಳೀಯ ಉರಗ ಪ್ರೇಮಿಯೊಬ್ಬರು ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಡನಹಳ್ಳಿ ಗ್ರಾಮದ ನಿವಾಸಿ ಪದ್ಮನಾಭ ಎಂಬುವವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಬೆಳೆಸಲಾಗಿದ್ದ ಸೀಮೆ ಹುಲ್ಲಿನ ಮಧ್ಯೆ ಈ ದೈತ್ಯ ಹೆಬ್ಬಾವು ಅಡಗಿ ಕುಳಿತಿತ್ತು. ಜಮೀನಿನ ಮಾಲೀಕ ಪದ್ಮನಾಭ ಅವರು ಎಂದಿನಂತೆ ಕೆಲಸಕ್ಕೆ ಹೋದಾಗ ಹುಲ್ಲಿನ ಪೊದೆಯಲ್ಲಿ ಹೆಬ್ಬಾವು ಇರುವುದು ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಅವರು ತಕ್ಷಣವೇ ತಮ್ಮ ಸ್ನೇಹಿತನಿಗೆ ವಿಷಯ ತಿಳಿಸಿ, ನಂತರ ಹಲಗೂರು ನಿವಾಸಿಯಾದ ಖ್ಯಾತ ಉರಗ ಪ್ರೇಮಿ ಕೃಷ್ಣ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು.

ಮಾಹಿತಿ ತಿಳಿಯುತ್ತಿದ್ದಂತೆಯೇ ಜಮೀನಿಗೆ ಧಾವಿಸಿದ ಉರಗ ಪ್ರೇಮಿ ಕೃಷ್ಣ ಅವರು, ಸೀಮೆ ಹುಲ್ಲಿನ ನಡುವೆ ಅಡಗಿದ್ದ 10 ಅಡಿ ಉದ್ದದ ಹೆಬ್ಬಾವನ್ನು ಅತ್ಯಂತ ಚಾಣಾಕ್ಷತನದಿಂದ ಯಾವುದೇ ಗಾಯವಾಗದಂತೆ ಹಿಡಿದು ಚೀಲದಲ್ಲಿ ತುಂಬಿದರು. ಬಳಿಕ ಈ ಹೆಬ್ಬಾವನ್ನು ಸುರಕ್ಷಿತವಾಗಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಮುಕ್ತವಾಗಿ ಬಿಡಲಾಗಿದೆ. ಬೃಹತ್ ಹೆಬ್ಬಾವು ಸೆರೆಸಿಕ್ಕ ಬಳಿಕ ಜಮೀನಿನ ಮಾಲೀಕರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

“ಹಂಡನಹಳ್ಳಿ ಗ್ರಾಮದ ಸಮೀಪದಲ್ಲಿ ಈ ಹಿಂದೆ ಗ್ರಾನೈಟ್ ಕ್ವಾರಿ (ಗಣಿಗಾರಿಕೆ) ನಡೆಯುತ್ತಿತ್ತು. ಆ ಜಾಗ ಈಗ ಹಾಳು ಬಿದ್ದಿರುವುದರಿಂದ ಸುತ್ತಮುತ್ತಲಿನ ಕಾಡು ಪ್ರಾಣಿಗಳಿಗೆ ಆಶ್ರಯ ತಾಣವಾಗಿದೆ. ಈ ಭಾಗದಲ್ಲಿ ಚಿರತೆಗಳು ಹಾಗೂ ಹೆಬ್ಬಾವುಗಳು ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಸಹ, ಇದುವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ” ಎಂದು ಜಮೀನಿನ ಮಾಲೀಕ ಪದ್ಮನಾಭ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಗ್ರಾಮದ ಸುತ್ತಮುತ್ತ ಚಿರತೆ ಹಾಗೂ ಹೆಬ್ಬಾವುಗಳ ಹಾವಳಿ ಹೆಚ್ಚುತ್ತಿರುವುದರಿಂದ ಅರಣ್ಯ ಇಲಾಖೆಯು ತಕ್ಷಣವೇ ಎಚ್ಚೆತ್ತುಕೊಂಡು, ಈ ಭಾಗದಲ್ಲಿ ನಿಗಾ ವಹಿಸಬೇಕು ಮತ್ತು ಸಾರ್ವಜನಿಕರ ಹಾಗೂ ಜಾನುವಾರುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಂಡನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 


Share News