Share News

ಬೆಂಗಳೂರು: ರಾಜಕಾರಣಿಗಳು ಹಾಗೂ ಪ್ರಭಾವಿ ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ್ದ ಬೆಂಗಳೂರು ಲೋಕಾಯುಕ್ತದ ಖಡಕ್ ಪೊಲೀಸ್ ಸೂಪರಿಂಟೆಂಡೆಂಟ್ (SP) ಶಿವಪ್ರಕಾಶ್ ದೇವರಾಜ್ ಅವರನ್ನು ರಾಜ್ಯ ಸರ್ಕಾರ ಯಾವುದೇ ಸ್ಥಳ ತೋರಿಸದೆ ದಿಢೀರ್ ವರ್ಗಾವಣೆ ಮಾಡಿದೆ. ಈ ಮೂಲಕ ನಿರಂತರ ದಾಳಿಗಳಿಂದ ಕಂಗೆಟ್ಟಿದ್ದ ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರ ‘ಗುಡ್ ನ್ಯೂಸ್’ ನೀಡಿದೆಯೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

​ದಕ್ಷತೆ ಹಾಗೂ ರಾಜಿ ಇಲ್ಲದ ತನಿಖೆಗೆ ಹೆಸರಾಗಿದ್ದ ಶಿವಪ್ರಕಾಶ್ ದೇವರಾಜ್ ಅವರ ಅಧಿಕಾರಾವಧಿಯಲ್ಲಿ ಇತ್ತೀಚೆಗೆ ಹಲವು ಹಗರಣಗಳು ಬಯಲಾಗಿದ್ದವು. ಅವರ ವರ್ಗಾವಣೆ ಸಾರ್ವಜನಿಕ ವಲಯ ಹಾಗೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಬಕಾರಿ ಇಲಾಖೆ ಮೇಲಿನ ದಾಳಿ: ಬೆಂಗಳೂರಿನ ಎಲ್ಲಾ ಪ್ರಮುಖ ಅಬಕಾರಿ ಇಲಾಖೆಯ ಕಚೇರಿಗಳ ಮೇಲೆ ಶಿವಪ್ರಕಾಶ್ ದೇವರಾಜ್ ತಂಡ ದಿಢೀರ್ ದಾಳಿ ನಡೆಸಿ ಭ್ರಷ್ಟಾಚಾರದ ಜಾಲವನ್ನು ಬಯಲಿಗೆಳೆದಿತ್ತು.

​ಕೋಟಿ ಕೋಟಿ ಬೆಲೆಯ ಜಮೀನು ಹಗರಣ: ಯಲಹಂಕದ ನೂರಾರು ಕೋಟಿ ರೂಪಾಯಿ ಮೌಲ್ಯದ 9 ಮತ್ತು 2 ಎಕರೆ ಸರ್ಕಾರಿ ಜಮೀನನ್ನು ಅನಧಿಕೃತ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದ ಹಿನ್ನೆಲೆಯಲ್ಲಿ ಪ್ರಭಾವಿ ಕೆಎಎಸ್ (KAS) ಅಧಿಕಾರಿ ಹಾಗೂ ತಹಶೀಲ್ದಾರ್ ವಿರುದ್ಧ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

​ಈ ಬೃಹತ್ ಹಗರಣಗಳ ತನಿಖೆ ವೇಳೆ ತನಿಖೆಯನ್ನು ಹಳ್ಳಹಿಡಿಸಲು ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳಿಂದ ತೀವ್ರ ಒತ್ತಡ ಬಂದಿತ್ತು ಎನ್ನಲಾಗಿದೆ. ಆದರೆ, ಎಂತಹದ್ದೇ ಒತ್ತಡ ಬಂದರೂ ಲೆಕ್ಕಿಸದ ಶಿವಪ್ರಕಾಶ್ ದೇವರಾಜ್ ಅವರು ದಾಖಲೆಗಳ ಸಮೇತ ಭ್ರಷ್ಟರ ಮುಖವಾಡ ಕಳಚಿದ್ದರು.

ತನ್ನ ಕರ್ತವ್ಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ಶಿವಪ್ರಕಾಶ್ ದೇವರಾಜ್ ಅವರಿಗೆ ಇದು ಭೀತಿಯಿಂದ ಮಾಡಲಾದ 9ನೇ ವರ್ಗಾವಣೆ ಎನ್ನಲಾಗಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಉಳಿಸಿಕೊಳ್ಳದ ಸರ್ಕಾರ, ಅವರಿಗೆ ಯಾವುದೇ ಹುದ್ದೆ ತೋರಿಸದೆ ಎತ್ತಂಗಡಿ ಮಾಡಿರುವುದು ಭ್ರಷ್ಟರಿಗೆ ಸರ್ಕಾರ ಸಾಥ್ ನೀಡುತ್ತಿದೆಯೇ ಎಂಬ ಅನುಮಾನವನ್ನು ಬಲಪಡಿಸಿದೆ.

​ಶಿವಪ್ರಕಾಶ್ ದೇವರಾಜ್ ಲೋಕಾಯುಕ್ತ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಾಗಲೇ ‘ಹಲವರ ಗ್ರಹಚಾರ ಕೆಡಲಿದೆ’ ಎಂದು ವಿಶ್ಲೇಷಿಸಲಾಗಿತ್ತು. ಅದರಂತೆಯೇ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಅಧಿಕಾರಿಯನ್ನು ರಾಜಕೀಯ ದುರುದ್ದೇಶದಿಂದ ವರ್ಗಾವಣೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

 


Share News