ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗೂಂಡಾಗಿರಿ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದ ವೈಟ್ಫೀಲ್ಡ್ (Whitefield) ಪೊಲೀಸ್ ವಿಭಾಗದ ವ್ಯಾಪ್ತಿಯಲ್ಲಿ ತಡರಾತ್ರಿ ಪೊಲೀಸರು ಹಠಾತ್ ಜಂಟಿ ದಾಳಿ ನಡೆಸುವ ಮೂಲಕ ರೌಡಿ ಶೀಟರ್ಗಳಿಗೆ ಸಿಂಹಸ್ವಪ್ನವಾಗಿದ್ದಾರೆ.
ವೈಟ್ಫೀಲ್ಡ್ ವಿಭಾಗದ ಡಿಸಿಪಿ, ಎಸಿಪಿಗಳು ಹಾಗೂ ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ರಾತ್ರಿ 12 ಗಂಟೆಯಿಂದ ಮುಂಜಾನೆ 3 ಗಂಟೆಯವರೆಗೆ ಈ ವಿಶೇಷ ‘ಮಿಡ್ನೈಟ್ ಆಪರೇಷನ್’ ನಡೆಸಲಾಯಿತು.
ರೌಡಿಗಳ ಅಡ್ಡೆ ಹಾಗೂ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲು ಒಟ್ಟು 28 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಸುಮಾರು 140 ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡಿದ್ದ ಈ ಪಡೆಗಳು, ಏಕಾಏಕಿ ರೌಡಿಗಳ ಮನೆಗಳಿಗೆ ನುಗ್ಗಿ ತಪಾಸಣೆ ನಡೆಸಿವೆ. ಕಾರ್ಯಾಚರಣೆಯ ವೇಳೆ ಸುಮಾರು 150ಕ್ಕೂ ಹೆಚ್ಚು ಹಳೆ ಹಾಗೂ ಸಕ್ರಿಯ ರೌಡಿ ಶೀಟರ್ಗಳ ಮನೆಗಳನ್ನು ಜಾಲಾಡಿ, ಅವರ ಪ್ರಸ್ತುತ ಚಟುವಟಿಕೆಗಳ ಕುರಿತು ತೀವ್ರ ಪರಿಶೀಲನೆ ನಡೆಸಲಾಯಿತು.
ರೌಡಿಗಳ ಮನೆ ತಪಾಸಣೆ ವೇಳೆ ಸರಿಯಾದ ದಾಖಲೆಗಳಿಲ್ಲದ ಕಾರಣ ಅವರ ಬಳಿಯಿದ್ದ ಸುಮಾರು 13 ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಸಾರ್ವಜನಿಕ ಶಾಂತಿಗೆ ಭಂಗ ತಂದರೆ ಅಥವಾ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಂತಹ ರೌಡಿ ನಿಗ್ರಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸಿಬ್ಬಂದಿಗೆ ಮುಂದಿನ ದಿನಗಳಲ್ಲಿ ವಹಿಸಬೇಕಾದ ಮುಂಜಾಗ್ರತೆಗಳ ಕುರಿತು ಹಿರಿಯ ಅಧಿಕಾರಿಗಳು ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
