Share News

ಆಂಧ್ರಪ್ರದೇಶ ಪೊಲೀಸರ ಭರ್ಜರಿ ಕಾರ್ಯಾಚರಣೆ | ಕೊರಟಗೆರೆ, ಕ್ಯಾತಸಂದ್ರ ದೇವಸ್ಥಾನಗಳಲ್ಲಿ ಸರಣಿ ಕಳವು

​ಪಾವಗಡ: ತುಮಕೂರು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆಸಿ ಭಕ್ತರಲ್ಲಿ ಆತಂಕ ಮೂಡಿಸಿದ್ದ ಖದೀಮರ ಜಾಲವನ್ನು ಆಂಧ್ರಪ್ರದೇಶದ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 21 ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

​ಆರೋಪಿಗಳು ಇತ್ತೀಚೆಗೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ದೇವಸ್ಥಾನ ಹಾಗೂ ತುಮಕೂರು ನಗರದ ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಕವರ್ಚು ನಡೆಸಿ, ದೇವತಾ ಮೂರ್ತಿಗಳ ಬೆಳ್ಳಿ ಆಭರಣಗಳು ಮತ್ತು ಕಾಣಿಕೆ ಡಬ್ಬಿಯಲ್ಲಿದ್ದ ಮೌಲ್ಯಯುತ ವಸ್ತುಗಳನ್ನು ದೋಚಿ ತಲೆಮರೆಸಿಕೊಂಡಿದ್ದರು.

​ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಚಲನವಲನಗಳ ಆಧಾರದ ಮೇಲೆ ಆಂಧ್ರಪ್ರದೇಶದಲ್ಲಿ ಸುಳಿವು ಲಭಿಸಿತ್ತು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಆಂಧ್ರಪ್ರದೇಶದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ಅವರಿಂದ ಕಳುವಾಗಿದ್ದ ಸಂಪೂರ್ಣ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.


Share News