Share News

​ಹನೂರು (ಚಾಮರಾಜನಗರ): ತಾಲೂಕಿನ ರಾಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ತೀವ್ರ ಅಭಾವ ಉಂಟಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಿನನಿತ್ಯ ಪರದಾಡುವಂತಾಗಿದೆ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಇತ್ತೀಚೆಗೆ ಸುರಿದ ಭಾರಿ ಮಳೆಯ ಆರ್ಭಟಕ್ಕೆ ಶಾಲೆಯ ಆವರಣ ಹಾಗೂ ತರಗತಿ ಕೊಠಡಿಗಳ ಸುತ್ತಮುತ್ತ ನೀರು ನಿಂತು ಇಡೀ ಶಾಲೆ ಜಲಾವೃತಗೊಂಡಿದೆ. ಕಳಪೆ ಬಿಸಿಯೂಟ, ಹುಳ-ಹುಪ್ಪಟೆಗಳು ಸಿಗುವ ಅಡುಗೆ, ಶೌಚಾಲಯದಲ್ಲಿ ನೀರಿನ ಅಭಾವ ಹಾಗೂ ನೈರ್ಮಲ್ಯದ ಕೊರತೆ, ಬಿರುಕು ಬಿಟ್ಟ ತರಗತಿ ಗೋಡೆಗಳು ಮಕ್ಕಳ ಜೀವಕ್ಕೆ ಕಂಠಕವಾಗಿ ಪರಿಣಮಿಸಿವೆ.

​ಶಾಲೆಯ ಈ ದುಸ್ಥಿತಿಯ ವಿರುದ್ಧ ಆಕ್ರೋಶ ಹೊರಹಾಕಿರುವ ಗ್ರಾಮಸ್ಥರು, ತಕ್ಷಣವೇ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಶಾಲೆಗೆ ಬೀಗ ಜಡಿದು ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

 


Share News